ಕುಂದ ಗ್ರಾಮದಲ್ಲಿ ಶಾಸಕ ಎ.ಎಸ್ ಪೊನ್ನಣ್ಣ ಗಿರಿಜನರಿಗೆ ಪೌಷ್ಟಿಕ ಆಹಾರ ವಿತರಿಸಿದರು. ಡಿ.ಜಿ.ಗುರುಶಾಂತಪ್ಪ, ಕೆ.ಸಿ.ಅಪ್ಪಣ್ಣ, ಉಸ್ಮಾ ಇದ್ದರು. 
ಜಿಲ್ಲೆ

ಸರ್ಕಾರದ ಯೋಜನೆ ಸದ್ಬಳಕೆಯಾಗಲಿ

ಎ. ಆರ್. ರಘುರಾಮ

ಗೋಣಿಕೊಪ್ಪಲು: ಗಿರಿಜನರು ಪೌಷ್ಟಿಕ ಆಹಾರದಿಂದ ವಂಚಿತರಾಗಬಾರದೆಂಬ ಕಾರಣಕ್ಕೆ ಸರ್ಕಾರ ಪೌಷ್ಟಿಕ ಆಹಾರ ವಿತರಣೆ ಯೋಜನೆ ಜಾರಿಗೆ ತಂದಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಸಲಹೆ ನೀಡಿದರು.

ಪೊನ್ನಂಪೇಟೆ ತಾಲೂಕಿನ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ ಗ್ರಾಮದ ಗಿರಿಜನರ ಬಸವೇಶ್ವರ ಬಡಾವಣೆಯಲ್ಲಿ ಗುರುವಾರ ಆಯೋಜಿಸಿದ್ದ ಗಿರಿಜನರಿಗೆ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಿರಿಜನರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಇದರಲ್ಲಿ ಪೌಷ್ಟಿಕ ಆಹಾರ ವಿತರಣೆಯೂ ಒಂದು ಎಂದರು.

ವರ್ಷಕ್ಕೆ ಆರು ಬಾರಿ ಗಿರಿಜನರಿಗೆ ಈ ಹಿಂದೆ ಪೌಷ್ಟಿಕ ಆಹಾರ ವಿತರಿಸಲಾಗುತ್ತಿತ್ತು. ಇದೀಗ ಸರ್ಕಾರದೊಂದಿಗೆ ಚರ್ಚೆ ನಡೆಸಿ ವರ್ಷಪೂರ್ತಿ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಕನಿಷ್ಠ 9 ತಿಂಗಳಾದರೂ ಈ ಪ್ರಯೋಜನ ಗಿರಿಜನರಿಗೆ ಲಭಿಸಲಿದೆ ಎಂದರು.

ಪೌಷ್ಟಿಕ ಆಹಾರ ವಿತರಣೆಯ ಟೆಂಡರ್ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಆದರೆ ಶಾಸಕರ ಪರಿಶ್ರಮದಿಂದಾಗಿ ಸರ್ಕಾರ ಆಹಾರ ವಿತರಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು, 7 ಸಾವಿರ ಗಿರಿಜನ ಕುಟುಂಬಕ್ಕೆ ಸೌಲಭ್ಯ ದೊರೆಯಲಿದೆ ಎಂದು ಪರಿಶಿಷ್ಟ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಡಿ.ಜಿ.ಗುರುಶಾಂತಪ್ಪ ಮಾಹಿತಿ ನೀಡಿದರು.

ಹಾಡಿ ಮುಖಂಡ ಯರವರ ಗಪ್ಪು, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಪ್ರಧಾನ ಕಾರ್ಯದರ್ಶಿ ಎ.ಜೆ.ಬಾಬು, ಮಹಿಳಾ ಸದಸ್ಯರಾದ ಕಡೆಮಾಡ ಕುಸುಮಾ, ನೂರೆರ ಧನ್ಯ, ಪುಲಿಯಂಡ ರೋಶನ್, ಹಾತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕೊಕ್ಕಂಡ ಗಿಣಿ ಗಣಪತಿ, ಅರುವತ್ತೋಕ್ಕಲು ಗ್ರಾಮ ಪಂಚಾಯಿತಿ ಸದಸ್ಯರಾದ ಸುಗುಣ ಸೋಮಯ್ಯ, ಪ್ರಮುಖರಾದ ಕೊಕ್ಕಂಡ ರೋಶನ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ಸಿ.ಅಪ್ಪಣ್ಣ, ಹಾತೂರು ಪಿಡಿಒ ಉಸ್ಮಾ ಇತರರಿದ್ದರು.