ಮಾಗಡಿ : ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡಾಗ ಮಾತ್ರ ಯೋಜನೆಗಳಿಗೆ ಅರ್ಥ ಬರಲಿದೆ ಎಂದು ನೇತೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ರಾಮಣ್ಣ ಹೇಳಿದರು.
ತಾಲೂಕಿನ ನೇತೇನಹಳ್ಳಿ ಗ್ರಾಪಂ ವ್ಯಾಪ್ತಿಯ ತಟವಾಳು ಶ್ರೀಬಸವೇಶ್ವರ ದೇವಾಲಯದ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಗ್ರಾಮಸಭೆಯಲ್ಲಿ ಮಾತನಾಡಿ, ಗ್ರಾಮೀಣ ಜನರಿಗೆ ಮಹತ್ವಾಕಾಂಕ್ಷೆಯ ನರೇಗಾ ಯೋಜನೆ ವರದಾನವಾಗಿದೆ. ಜನರು ಈ ಯೋಜನೆಯ ಲಾಭ ಪಡೆದಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಜತೆಗೆ ಸ್ವಾವಲಂಬಿ ಉದ್ಯೋಗ ಪಡೆದು ಆರ್ಥಿಕವಾಗಿ ಸಬಲರಾಗಬಹುದು.
ಗ್ರಾಪಂನಲ್ಲಿ ಸಮುದಾಯ ಆಧಾರಿತ ಕಾಮಗಾರಿಗಳು ವೈಯಕ್ತಿಕ ನರೇಗಾ ಕಾಮಗಾರಿಗಳ ಕಡೆ ಹೆಚ್ಚು ಗಮನ ಹರಿಸಲಾಗಿದೆ. ಕೆರೆ, ನಾಲೆಗಳು, ಶಾಲಾ ಆಟದ ಮೈದಾನಗಳು ಅಭಿವೃದ್ಧಿ ಕಾಣುತ್ತಿದೆ. ಗ್ರಾಮಗಳ ಜನರಿಗೆ ನರೇಗಾ ಯೋಜನೆಯಲ್ಲಿ ಉದ್ಯೋಗ ದೊರೆಯುತ್ತಿದೆ. ಗ್ರಾಪಂನ ನಾಗರಿಕರು ಜಾಬ್‌ಕಾರ್ಡ್ ಪಡೆದು ಕೆಲಸ ಕೇಳಿ ಬರುವ ಜನರಿಗೆ ನರೇಗಾ ಯೋಜನೆಯಡಿ ವೈಯಕ್ತಿಕ, ಸಾಮೂಹಿಕ ಉದ್ಯೋಗ ನೀಡಲಾಗುವುದು. ನಾಗರಿಕರು ನರೇಗಾ ಯೋಜನೆಯ ಲಾಭ ಪಡೆದು ಆರ್ಥಿಕ ಅಭಿವೃದ್ಧಿ ಜತೆಗೆ ಗ್ರಾಮಗಳನ್ನು ಅಭಿವೃದ್ಧಿ ಮಾಡಬಹುದು ಎಂದರು.
ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ: ಬೇಸಿಗೆ ಸಮೀಪಿಸಿರುವುದರಿಂದ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಬವಿಸಿದೆ ಎಂದು ವಾಟರ್‌ಮನ್‌ಗಳು ತುರ್ತಾಗಿ ತಿಳಿಸಬೇಕು. ಈ ಬಗ್ಗೆ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು. ಗ್ರಾಪಂಗಳ ಕೊಳವೆ ಬಾವಿ ಪಕ್ಕ ಖಾಸಗಿ ಕೊಳವೆ ಬಾವಿ ಕೊರೆಸಲು ಅವಕಾಶ ನೀಡಬೇಡಿ. ಇದರಲ್ಲಿ ಲೋಪದೋಷಗಳು ಕಂಡುಬಂದರೆ ಸಂಬಂಧಪಟ್ಟ ವಾಟರ್‌ಮನ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೆ.ಟಿ.ಮಂಜುನಾಥ್ ಮಾತನಾಡಿ, ಗ್ರಾಮಸಭೆಗಳಿಗೆ ಗ್ರಾಮಸ್ಥರು ಕಡ್ಡಾಯವಾಗಿ ಭಾಗವಹಿಸಿ ಸರ್ಕಾರದ ಯೋಜನೆಗಳನ್ನು ತಿಳಿದುಕೊಳ್ಳಿ. ಜಮೀನು, ಮನೆಗಳ ದಾಖಲೆ ವಿಚಾರವಾಗಿ ಕಚೇರಿಗಳಿಗೆ ಅಲೆಯದೆ ಗ್ರಾಮಸಭೆಗಳಿಗೆ ಭಾಗವಹಿಸುವ ಅಧಿಕಾರಿಗಳ ಬಳಿ ಸಮಸ್ಯೆ ಬಗೆಹರಿಸಿಕೊಳ್ಳಿ. ಗ್ರಾಮಗಳಲ್ಲಿ ಮೂಲ ಸಮಸ್ಯೆಗಳಿದ್ದರೆ ಗ್ರಾಮಸಭೆಯಲ್ಲಿ ತಿಳಿಸಿದರೆ ಸಂಬಂಧ ಪಟ್ಟವರಿಂದ ಸಮಸ್ಯೆ ಬಗೆಹರಿಸಲು ಗ್ರಾಮಸಭೆ ಉತ್ತಮ ವೇದಿಕೆಯಾಗಿದೆ ಎಂದರು.
ಪಿಡಿಒ ರಾಕೇಶ್ ಮಾತನಾಡಿ, ಇ -ಖಾತೆ ಮಾಡಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದ್ದು, ನಾಗರಿಕರು ಸಮರ್ಪಕ ದಾಖಲೆ ನೀಡಿ ಇ-ಖಾತೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಉಪಾಧ್ಯಕ್ಷೆ ವರಲಕ್ಷ್ಮಮ್ಮ, ಸದಸ್ಯರಾದ ಪ್ರಕಾಶ್, ಲಕ್ಷ್ಮೀದೇವಿ, ಸುರೇಶ್, ಪುರುಷೋತ್ತಮ್, ದೀಪಿಕಾ, ಸುರೇಶ್, ರೂಪಾ, ಲಕ್ಷ್ಮೀದೇವಿ, ಬಸವರಾಜು, ಶಿವರುದ್ರಮ್ಮ, ಕಲಾ, ಸಾಕಮ್ಮ, ಶಿವಕುಮಾರ್, ನಾಗರತ್ನ, ಬಸವಲಿಂಗಯ್ಯ ಸೇರಿ ಶಾಲಾ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.