ಬಾಗಲಕೋಟೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಅಭಿಯಾನದ ಶಕ್ತಿ ಕೇಂದ್ರ ಪ್ರಮುಖರ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರನ್ನು ಸನ್ಮಾನಿಸಲಾಯಿತು.  
ಜಿಲ್ಲೆ

ಸರ್ಕಾರದ ಯೋಜನೆ ಮನೆ ಮನೆಗೆ ತಲುಪಿಸಿ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಜನ ಕಲ್ಯಾಣಕ್ಕಾಗಿ ಉತ್ತಮ ಯೋಜನೆಗಳನ್ನು ನೀಡಿದೆ. ಪ್ರತಿಯೊಂದು ಕುಟುಂಬಕ್ಕೆ ಒಂದಿಲ್ಲೊಂದು ಯೋಜನೆ ತಲುಪಿವೆ. ಈ ಬಗ್ಗೆ ಜಾಗೃತಿ ಮೂಡಿಸಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಅಭಿಯಾನದ ಶಕ್ತಿ ಕೇಂದ್ರ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಯೋಜನೆಗಳ ಲಾಭ ಪಡೆದ ಫಲಾನುಭವಿಗಳನ್ನು ಗುರುತಿಸಿ ಮತವಾಗಿ ಪರಿವರ್ತಿಸಬೇಕು. ಪ್ರಧಾನ ನರೇಂದ್ರ ಮೋದಿ ಜಗತ್ತು ಮೆಚ್ಚಿದ ವಿಶ್ವದ ನಾಯಕ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆ ಮನೆ ಮನೆಗೆ ತಲುಪಿಸಿ. ವಿಶ್ವದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಕ್ತಿ ಹೆಚ್ಚಿದೆ. ಭಾರತ ನೋಡುವ ದೃಷ್ಟಿಕೋನ ಬದಲಾಗಿದೆ. ಅವುಗಳ ಬಗ್ಗೆ ಜನರ ಬಗ್ಗೆ ತಿಳಿ ಹೇಳಿ. ಜಿಲ್ಲೆಗೆ ನಮ್ಮ ಸಚಿವರು ತಂದ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕು. ಬಿಜೆಪಿ ಯಾವ ರೀತಿ ಅಭಿವೃದ್ಧಿ ಮಾಡಿದೆ ಎನ್ನುವು ಕುರಿತು ಜಾಗೃತಿ ಮೂಡಿಸಬೇಕು. ಕೃಷಿ ಸಮ್ಮಾನ, ಉಜ್ವಲ ಯೋಜನೆ ಪ್ರತಿ ಕುಟುಂಬಕ್ಕೆ ತಲುಪಿದ್ದು, ಅವರನ್ನು ಸಂಪರ್ಕ ಮಾಡಿ. ಕೇವಲ ತೀರ್ಮಾನ, ಪ್ರಮಾಣದಿಂದ ಆಗಲ್ಲ. ನೇರ ಸಂಪರ್ಕದಿಂದ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯವಿದೆ ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಉದ್ಘಾಟಿಸಿದರು. ಸಚಿವರಾದ ಮುರುಗೇಶ ನಿರಾಣಿ, ಗೋವಿಂದ ಕಾರಜೋಳ, ಶಾಸಕರಾದ ವೀರಣ್ಣ ಚರಂತಿಮಠ, ಸಿದ್ದು ಸವದಿ, ದೊಡ್ಡನಗೌಡ ಪಾಟೀಲ, ಅಭಯ ಪಾಟೀಲ, ವಿ.ಪ ಸದಸ್ಯರಾದ ಪಿ.ಎಚ್.ಪೂಜಾರ, ಹನುಮಂತ ನಿರಾಣಿ ಸೇರಿದಂತೆ ಇತರರು ಇದ್ದರು.