ಜಿಲ್ಲೆ

ಸರ್ಕಾರದ ಯೋಜನೆ ಪ್ರಯೋಜನ ಪಡೆಯಿರಿ

ಬೀದರ್: ಸ್ತ್ರೀ ಶಕ್ತಿ ಹಾಗೂ ಮಹಿಳಾ ಸ್ವಸಹಾಯ ಸಂಘಗಳು ಸರ್ಕಾರದಿಂದ ದೊರೆಯುವ ಯೋಜನೆಗಳ ಪ್ರಯೋಜನ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ ಹೇಳಿದರು.

ಜಿಪಂ, ತಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಸಹಯೋಗದಡಿ ಖಾಶೆಂಪುರ (ಪಿ) ಗ್ರಾಮದಲ್ಲಿ ಆಯೋಜಿಸಿದ್ದ ಅಮೃತ ಯೋಜನೆಯಡಿ ಸ್ತ್ರೀ ಶಕ್ತಿ ಸಂಘಗಳಿಗೆ ಬೀಜಧನ ಚೆಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಸಹಾಯಧನ ಪಡೆದು ಸಂಘಗಳು ಸಣ್ಣ ಕೈಗಾರಿಕೆಗಳನ್ನು ಆರಂಭಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯ ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳು ದೇಶಕ್ಕೆ ಮಾದರಿಯಾಗಿವೆ. ಮಹಿಳೆಯರು ಸಂಘಗಳ ಮೂಲಕ ಪ್ರತಿ ವಾರ ಸ್ವಲ್ಪ ಹಣ ಕೂಡಿಟ್ಟು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಸಂಘಗಳಿಗೆ ಸರ್ಕಾರ ನೀಡುವ ಸಾಲಸೌಲಭ್ಯ ವೈಯಕ್ತಿಕ ಕೆಲಸಗಳಿಗೆ ಬಳಸಬಾರದು. ಸಾಮೂಹಿಕವಾಗಿ ಸಂಘದಲ್ಲಿರುವ ಎಲ್ಲರೂ ಸೇರಿ ಸಣ್ಣ ಉದ್ಯಮ ಆರಂಭಿಸಬೇಕು ಎಂದರು.

ಒಂದು ಸಂಘಕ್ಕೆ ಒಂದು ಲಕ್ಷದಂತೆ ಬೀದರ್ ದಕ್ಷಿಣ ಕ್ಷೇತ್ರದ 25 ಸಂಘ (ಬೀದರ್ ತಾಲೂಕಿನ 14, ಹುಮನಾಬಾದ್ ತಾಲೂಕಿನ 11) ಗಳಿಗೆ 25 ಲಕ್ಷ ರೂ. ಚೆಕ್ ವಿತರಿಸಲಾಗಿದೆ. ಸ್ತ್ರೀ ಶಕ್ತಿ ಸಂಘಗಳು ಇದರ ಸದುಪಯೋಗ ಪಡೆದು ಕೈಗಾರಿಕೆ ಸ್ಥಾಪಿಸಿ ಸಾಮೂಹಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.

ಸರ್ಕಾರ ನೀಡಿರುವ ಸಹಾಯಧನ ಸದುಪಯೋಗ ಪಡೆದು ಕೆಲ ತಿಂಗಳಲ್ಲಿ ಅಭಿವೃದ್ಧಿ ಸಾಧಿಸುವ ಸ್ತ್ರೀ ಶಕ್ತಿ ಸಂಘಗಳಿಗೆ ವೈಯಕ್ತಿಕವಾಗಿ 50 ಸಾವಿರ ರೂ. ನೆರವು ನೀಡುವೆ. ಕ್ಷೇತ್ರ ವ್ಯಾಪ್ತಿಯ ಮಹಿಳಾ ಸಂಘಗಳನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿರುವೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಶಕ ರವೀಂದ್ರ ರತ್ನಾಕರ, ಬೀದರ್ ತಾಪಂ ಇಒ ಮಾಣಿಕರಾವ ಪಾಟೀಲ್, ಹುಮನಾಬಾದ್ ಸಿಡಿಪಿಒ ಶಿವಪ್ರಕಾಶ ಹಿರೇಮಠ, ಬೀದರ್ ಸಿಡಿಪಿಒ ಮಹಾಂತೇಶ ಬಜೆಂತ್ರಿ ಇತರರಿದ್ದರು.