ಚನ್ನರಾಯಪಟ್ಟಣ: ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಬರುವ ಸರ್ಕಾರದ ಯಾವುದೇ ಯೋಜನೆಗಳು ನಮ್ಮಗಳಿಗೆ ಪರಿಪೂರ್ಣವಾಗಿ ತಲುಪುತಿಲ್ಲ ಎಂದು ದಲಿತಪರ ಸಂಘಟನೆಗಳ ಮುಖಂಡ ದಂಡೋರ ಮಂಜುನಾಥ್ ಆರೋಪಿಸಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿ, ಹಿಂದುಳಿದ ಜನಾಂಗಗಳಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿ ಬದುಕಲು ಬಿಡಿ ಎಂದು ಮನವಿ ಮಾಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು-ಕೊರತೆಗಳು ಹೇಳಿಕೊಳ್ಳಲು ಸಾಕಷ್ಟಿವೆ. ಅಪರೂಪಕ್ಕೆ ಸಭೆ ಬೇರೆ ಕರೆಯಲಾಗಿದೆ. ಆದರೆ ಯಾವ ಯಾವ ಇಲಾಖೆಯ ಅಧಿಕಾರಿಗಳು ಬಂದಿದ್ದಾರೆ ತೋರಿಸಿ ಸ್ವಾಮಿ, ಅಧಿಕಾರಿಗಳು ಇದ್ದರೆ ಮಾತ್ರ ಆಯಾ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸಲು ಸಾಧ್ಯ. ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು ಎಂದು ಮನವಿ ಮಾಡಿದರು.
ಪಟ್ಟಣದ ಎಡಿ ಕಾಲನಿಯಲ್ಲಿ ಸುಮಾರು 447 ಪಡಿತರ ಚೀಟಿಗಳಿದ್ದರೂ ನಮ್ಮಗಳಿಗೆ ಒಂದು ನ್ಯಾಯಬೆಲೆ ಅಂಗಡಿ ಕಲ್ಪಿಸಿಲ್ಲ. ತಾಲೂಕಿನಲ್ಲಿ ಹಿಂದುಳಿದ ಯಾವ ಜನಾಂಗದ ವ್ಯಕ್ತಿಗೆ ನ್ಯಾಯಬೆಲೆ ಅಂಗಡಿ ನೀಡಿದ್ದೀರ ತಿಳಿಸಿ ನೋಡೋಣ. ಎಡಿ ಕಾಲನಿಗೆ ಪ್ರಥ್ಯೇಕವಾಗಿ ನ್ಯಾಯಬೆಲೆ ಅಂಗಡಿ ಬೇಕೇ ಬೇಕು ಎಂದು ಆಗ್ರಹಿಸಿದರು. ಇದಕ್ಕೆ ಎಲ್ಲ ಮುಖಂಡರು ದ್ವನಿಗೂಡಿಸಿದರು.
ಕೂಡಲೆ ತಹಸೀಲ್ದಾರ್ ಮಾತನಾಡಿ, ಇಂತಹ ಸಭೆಗೆ ಹಾಜರಾಗಿ ಮಾಹಿತಿ ನೀಡುವುದು ಅಧಿಕಾರಿಗಳ ಜವಾಬ್ದಾರಿ. ಆದರೆ ಯಾವ ಯಾವ ಇಲಾಖೆಯ ಅಧಿಕಾರಿಗಳು ಸಭೆಗೆ ಬಂದಿಲ್ಲ ಎಂಬುದನ್ನು ಗಮನಿಸಿ ಅವರಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.
ಪಟ್ಟಣದ ಎಡಿ ಕಾಲನಿ ನಿವಾಸಿ ಮಂಜು ಮಾತನಾಡಿ, ಎಡಿ ಕಾಲನಿಯಲ್ಲಿ 18 ಕ್ಕೂ ಹೆಚ್ಚು ಮನೆಗಳು ಬಿದ್ದು 2-3 ವರ್ಷಗಳೇ ಕಳೆದಿವೆ. ಆದರೆ ಇದೂ ವರೆಗೂ ಯಾವುದೇ ಪರಿಹಾರ ಬಂದಿಲ್ಲ. ಆ ಕುಟುಂಬಗಳಿಗೆ ಯಾವುದೇ ಇಲಾಖೆ ಸೂರು ಕಲ್ಪಿಸಿಲ್ಲ. ಇನ್ನೂ ಎಷ್ಟು ದಿನ ಕಷ್ಟ ಅನುಭವಿಸಬೇಕು ಎಂದು ಅಳಲು ತೋಡಿಕೊಂಡರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಆಶ್ರಯ ಯೋಜನೆಯಡಿ 1400 ಮನೆಗಳು ಬಂದಿದ್ದು ಮನೆ ಕಳೆದುಕೊಂಡಿರುವ ಸಾಕಷ್ಟು ಕುಟುಂಬಗಳನ್ನು ಗುರುತಿಸಿ ಆಯಾ ಗ್ರಾಪಂ ಮೂಲಕ ನೀಡಲಾಗುತ್ತಿದೆ. ಮನೆ ಕಳೆದುಕೊಂಡಿರುವ ಕುಟುಂಬಗಳ ಪಟ್ಟಿ ಕೊಡಿ ಅವರಿಗೆ ಶೀಘ್ರದಲ್ಲಿಯೇ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ದಲಿತಪರ ಸಂಘಟನೆಗಳ ಮುಖಂಡ ಮತಿಘಟ್ಟ ರಂಗಸ್ವಾಮಿ ಮಾತನಾಡಿ, ಎಸ್‌ಟಿಡಿಪಿ, 3055 ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಬರುವ ಅನುದಾನವನ್ನು ಕಾಲನಿಗಳ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಬಳಬೇಕು. ಆದರೆ ನಮ್ಮಗಳ ಹೆಸರಿನಲ್ಲಿ ಸರ್ಕಾರದಿಂದ ಬರುವ ಅನುದಾನ ಬೇರೆಲ್ಲೋ ದುರ್ಬಳಕೆಯಾಗುತ್ತಿದೆ ಎಂದು ದೂರಿದರು.
ಮತಿಘಟ್ಟ, ವಡ್ಡರಹಟ್ಟಿ, ಕರಿಕ್ಯಾತನಹಳ್ಳಿ ಸೇರಿದಂತೆ ಬಹುತೇಕ ಕಾಲನಿಗಳಿಗೆ ಕಾಂಕ್ರಿಟ್ ರಸ್ತೆ, ಚರಂಡಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅಗತ್ಯವಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಕೆಲಸಗಳಾಗದೆ ಕಾಲನಿಗಳು ಇನ್ನೂ ಕೊಂಪೆಯಂತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡ ಸೋಮಶೇಖರ್ ಮಾತನಾಡಿ, ತಾಲೂಕಿನ ಎಲ್ಲ ಗ್ರಾಮಗಳಿಗೂ ಸ್ಮಶಾನ ಅಗತ್ಯವಿದ್ದರೂ ಗುರುತಿಸಿ ಅಭಿವೃದ್ಧಿ ಪಡಿಸುವ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ದಿಡಗ ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿ ಜಮೀನು ಇಲ್ಲದ ಕುಟುಂಬಗಳು ಸಾಕಷ್ಟಿವೆ. ಅನಿವಾರ್ಯ ಯಾರಾದರೂ ಮೃತಪಟ್ಟರೆ ಕೆರೆ ಇಲ್ಲವೇ ಹಳ್ಳ-ಕೊಳ್ಳ ಪ್ರದೇಶದಲ್ಲಿ ಅನಾಥ ರೀತಿಯಲ್ಲಿ ಅಂತ್ಯಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಇದಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಉತ್ತರಿಸಿ, ತಾಲೂಕಿನ ಬಹುತೇಕ ಸ್ಮಶಾನಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಪುರಸಭಾ ವ್ಯಾಪ್ತಿಗೆ ಬರುವ ಸ್ಮಶಾಸಗಳಿಗೆ ಕಾಂಪೌಂಡ್ ಹಾಗೂ ರಸ್ತೆ ನಿರ್ಮಿಸಲು ಪುರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ದಿಂಡಗೂರು ಸಂತೋಷ್ ಮಾತನಾಡಿ, ಯಾವ ಪಂಚಾಯಿತಿಗಳಲ್ಲಿಯೂ ಸಾರ್ವಜನಿಕರ ಗಮನಕ್ಕೆ ತಂದು ಗ್ರಾಮಸಭೆ ನಡೆಸುವುದಿಲ್ಲ. ಇದರಿಂದ ಎಸ್ಸಿ ಎಸ್ಟಿ ಸಮುದಾಯಗಳಿಗೆ ಯಾವ ಯೋಜನೆ, ಎಷ್ಟು ಅನುದಾನ ಅಥವಾ ಎಷ್ಟು ಶೇಕಡಾವಾರು ಕೆಲಸಗಳು ಬಂದಿವೆ ಎಂಬುದೇ ತಿಳಿಯದಾಗಿದೆ. ತಾಲೂಕಿನಲ್ಲಿ ಕೆಲ ಇಲಾಖೆಗಳಲ್ಲಿ ಪಾರದರ್ಶಕ ಆಡಳಿತ ಸಿಗುತ್ತಿಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಎಲ್ಲ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಗ್ರಾಮಸಭೆ ನಡೆದಿರುವ ಬಗ್ಗೆ ಮಾಹಿತಿ ಕೇಳಲಾಗಿದೆ. ನಮ್ಮ ಗಮನಕ್ಕೆ ಬಂದಿರುವಂತೆ ಸಾಕಷ್ಟು ಪಂಚಾಯಿತಿಗಳಲ್ಲಿ ಗ್ರಾಮಸಭೆ ನಡೆಸಲಾಗಿದೆ. ಅದೇನೇ ಯೋಜನೆಗಳಿದ್ದರೂ ನಿಮ್ಮಗಳ ಗಮನಕ್ಕೆ ತರುವಂತೆ ಸೂಚಿಸಲಾಗುವುದು ಎಂದರು.
ಬಳಿಕ ಮಾತು ಮುಂದುವರಿಸಿ, ತಾಲೂಕಿನ ಎಲ್ಲಿಯೂ ದಲಿತ ಹಾಗೂ ಇತರೆ ಹಿಂದುಳಿದ ಸಮುದಾಯಗಳನ್ನು ನಮ್ಮ ಆಡಳಿತದಲ್ಲಿ ಕಡೆಗಣಿಸಿಲ್ಲ. ಖುದ್ದು ಭೇಟಿ ನೀಡಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಎಲ್ಲಿಯೂ ತಾತ್ಕಾರ ಮಾಡಿಲ್ಲ. ಹೆಚ್ಚಿನ ಅನುದಾನ ಕಲ್ಪಿಸಿ ಕಾಲನಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರಮುಖವಾಗಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಮಗೆ ಸರಿಯಾದ ಮಾಹಿತಿ ನೀಡುವುದಿಲ್ಲ ಎಂದು ತರಾಟೆ ತೆಗೆದುಕೊಂಡರು.
ತಹಸೀಲ್ದಾರ್ ಬಿ.ಎಂ.ಗೋವಿಂದರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಿ.ಬಿ.ಸುನೀಲ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪ ನರ್ದೇಶಕ ಶಂಕರಮೂರ್ತಿ, ಸಿಪಿಐ ಭಾನು ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.