ಚನ್ನರಾಯಪಟ್ಟಣ: ಜಿಲ್ಲೆಯನ್ನು ಕಡೆಗಣಿಸುತ್ತಿರುವ ಸರ್ಕಾರದಿಂದ ಯಾವುದೇ ನೆರವು ಕೋರದೆ ರೈತರ ಅಭಿವೃದ್ಧಿಗಾಗಿ 500 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೇರಿ ಆರಂಭಿಸಲಾಗುವುದು ಎಂದು ಹಾಸನ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ, ಶಾಸಕ ಹೆಚ್.ಡಿ.ರೇವಣ್ಣ ಹೇಳಿದರು.
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಜಿಲ್ಲೆಯ ಸಹಕಾರಿ ಒಕ್ಕೂಟಗಳು ಶುಕ್ರವಾರ ಅಯೋಜಿಸಿದ್ದ 69 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಕಾರಿ ರಂಗದಲ್ಲಿ ಶಿಸ್ತುಬದ್ಧವಾದ ಆಡಳಿತದಿಂದ ಜಿಲ್ಲೆಯ ಸಹಕಾರಿ ರಂಗಗಳು ಉತ್ತಮ ಸಾಧನೆ ಮಾಡಿವೆ. ರಾಜ್ಯದ 13 ಒಕ್ಕೂಟಗಳಲ್ಲೆ ಹಾಲಿಗೆ ಅತಿಹೆಚ್ಚಿನ ದರ ನೀಡುವ ಮೂಲಕ ಜಿಲ್ಲೆಯ ರೈತರ ನೆರವಿಗೆ ಹಾಸನ ಹಾಲು ಒಕ್ಕೂಟ ನಿಂತಿದೆ ಎಂದರು.
ನೆರೆಯ ಹೈದರಾಬಾದ್ ಡೈರಿ ಘಟಕ ಆರಂಭ ಮಾಡಲಾಗುತ್ತಿದ್ದು, ಅಂಡಮಾನ್‌ಗೆ ಐಸ್‌ಕ್ರೀಂ ಮತ್ತು ಸೇನೆಗೆ ಹಾಲು ಪೂರೈಸುವ ಮೂಲಕ ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ಇನ್ನೂ ರಾಜ್ಯಮಟ್ಟದ ಸಹಕಾರಿ ರತ್ನ ಪ್ರಶಸ್ತಿ ಪಡೆದ ಶಾಸಕ ಸಿ.ಎನ್.ಬಾಲಕೃಷ್ಣ ರಾಜ್ಯದ 224 ಶಾಸಕರುಗಳಲ್ಲೆ ಅತ್ಯಂತ ಕ್ರಿಯಾಶೀಲ ಕೆಲಸಗಾರ, ಅವರ ಸಹಕಾರಿ ಕ್ಷೇತ್ರದ ಸಾಧನೆ ಅಮೂಲ್ಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ತಾಲೂಕಿನ ರೈತರನ್ನು ಸ್ವಾವಲಂಬಿಗಳಾಗಿಸುವ ತಾಲೂಕಿನ 350 ಹಳ್ಳಿಗಳಲ್ಲಿ ಡೇರಿ ತೆರೆಯಲಾಗಿದೆ. ಉಳಿದ ಹಳ್ಳಿಗಳಲ್ಲಿಯೂ ಮಾರ್ಚ್‌ನೊಳಗೆ ಡೇರಿ ಆರಂಭಿಸಿ ಪ್ರತಿ ಹಳ್ಳಿಯಲ್ಲಿಯೂ ಜನರ ಜೀವನವನ್ನು ಸುಭದ್ರಗೊಳಿಸಲಾಗುವುದು ಎಂದರು.
ಕೇವಲ 6 ಸಾವಿರ ಮಂದಿಯಷ್ಟೆ ಸಾಲ ಪಡೆದಿದ್ದ ರೈತರ ಸಂಖ್ಯೆಯನ್ನು 42 ಸಾವಿರ ರೈತರಿಗೆ ಹೆಚ್ಚಿಸುವ ಮೂಲಕ 560 ಕೋಟಿ ರೂ. ಸಾಲ ಮನ್ನಾದ ಪ್ರಯೋಜನಕ್ಕೆ ಕಾರಣವಾಗಿದೆ. ಸಾಲ ನೀಡುವಲ್ಲಿ ಎಂದಿಗೂ ಪಕ್ಷ ರಾಜಕಾರಣ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಸ್ವಷ್ಟಪಡಿಸಿದರು.
ಸಕ್ಕರೆ ಕಾರ್ಖಾನೆ ಖಾಸಗೀಕರಣದಿಂದ ರೈತರನ್ನು, ಕಾರ್ಖಾನೆಯನ್ನು ಮತ್ತು ನೌಕರರನ್ನು ಉಳಿಸುವ ಕೆಲಸ ಮಾಡಲಾಗಿದೆ. ಖಾಸಗೀತನದ ವಿರುದ್ಧ ಹೋರಾಟ, ಟೀಕೆಗಳಿಗೆ ಹೆದರಿದ್ದರೇ ಇವತ್ತು ಕಾರ್ಖಾನೆ ಮುಚ್ಚಬೇಕಾಗಿತ್ತು. ಸದ್ಯವೀಗ ಲಾಭದಲ್ಲಿರುವ ಕಾರ್ಖಾನೆಯಿಂದ 4ನೇ ಬಾರಿಗೆ ಸಕ್ಕರೆ ವಿತರಣೆ, ಸರ್ಕಾರದ ಸಾಲ ತೀರಿಸಿ, ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ 25 ಕೋಟಿ ರೂ. ಠೇವಣಿ ಇಡಲಾಗಿದೆ. ಇದರೊಂದಿಗೆ ಕಾರ್ಖಾನೆಯ ಕೋಟ್ಯಾಂತರ ಮೌಲ್ಯದ ಆಸ್ತಿಯನ್ನು ಉಳಿಸಲಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ಮಾತನಾಡಿದರು. ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪಡೆದ ಶಾಸಕರನ್ನು ವಿವಿಧ ಸಹಕಾರಿ ಸಂಘಗಳು ಅಭಿನಂದಿಸಿದವು. ಉತ್ತಮ ಡೇರಿ, ವಿಎಸ್‌ಎಸ್‌ಎನ್ ಗಳನ್ನು ಗೌರವಿಸಲಾಯಿತ್ತು. ರೈತರ ಆರೋಗ್ಯ ಸಂಜೀವಿನಿ ಯಶ್ವಸಿನಿ ಆರೋಗ್ಯ ವಿಮೆಯ ಬಾಂಡ್‌ಗಳನ್ನು ಫಲಾನುಭವಿಗಳಿಗೆ ಇದೇ ಸಂದರ್ಭ ವಿತರಿಸಲಾಯಿತು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪುಟ್ಟಸ್ವಾಮಿಗೌಡ, ರಾಜ್ಯ ಮಾರಟ ಮಹಾಮಂಡಳ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜೇಗೌಡ, ನಿರ್ದೇಶಕ ಸತೀಶ್, ಪುಟ್ಟಸ್ವಾಮಿಗೌಡ, ಪುರಸಭೆ ಅಧ್ಯಕ್ಷೆ ರಾಧ, ಹೆಚ್‌ಎಸ್‌ಸ್‌ಕೆ ಅಧ್ಯಕ್ಷ ಸಿ.ಎನ್.ವೆಂಕಟೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ರಮೇಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ನಂಜುಂಡೇಗೌಡ, ವಿವಿಧ ಸಹಕಾರಿ ಕ್ಷೇತ್ರದ ಬಿ.ಎಚ್.ಶಿವಣ್ಣ, ಪರಮಕೃಷ್ಣೇಗೌಡ, ಅನಿಲ್‌ಮರಗೂರು, ವಿ.ಎನ್.ರಾಜಣ್ಣ ಹಾಗೂ ಇತರರು ಇದ್ದರು.
''ತಲಾ ಲೀಟರ್ ಹಾಲಿಗೆ 3 ರೂ. ದರ ಏರಿಕೆ ಮಾಡುವ ಮೂಲಕ ಸರ್ಕಾರ ರೈತರ ಪರವಾಗಿ ನಿಲ್ಲಬೇಕು. ಇಂದಿನ ದುಬಾರಿ ವೆಚ್ಚದಲ್ಲಿ ದರ ಏರಿಸದೇ ಹಿಂದೆ ಸರಿದ ಸರ್ಕಾರದ ನಡೆ ಸರಿಯಲ್ಲ. ಶೀಘ್ರ ಸರಿಪಡಿಸುವಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು.''
ಸಿ.ಎನ್.ಬಾಲಕೃಷ್ಣ, ಶಾಸಕ