ಜಿಲ್ಲೆ

ಸರ್ಕಾರದ ನಿಬಂಧನೆ ಪಾಲಿಸಲು ಸೂಚನೆ

ಗೋಕರ್ಣ: ಇಲ್ಲಿನ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರವನ್ನು ಸೋಮವಾರ ತೆರೆಯಲಾಗಿದ್ದು, ರಾಜ್ಯ ಪ್ರಿನ್ಸಿಪಲ್ ಸೆಕ್ರೆಟರಿ ಕೆ.ಪಿ. ಮೋಹನರಾಜ ಭೇಟಿ ನೀಡಿ ಮಂದಿರದಲ್ಲಿ ಕೈಗೊಳ್ಳಲಾದ ವಿವಿಧ ಏರ್ಪಾಟುಗಳನ್ನು ಪರಿಶೀಲಿಸಿದರು.

ವ್ಯವಸ್ಥೆಗೆ ಮೆಚ್ಚುಗೆ: ಮಂದಿರದಲ್ಲಿ ಮಾಡಲಾದ ಸ್ಕ್ರೀನಿಂಗ್ ಕ್ರಮ, ಪರಸ್ಪರ ಅಂತರ ಕಾಯ್ದುಕೊಂಡು ಮಾಡಲಾದ ಸರತಿ ಸಾಲು, ಎಲ್ಲ ವಿಭಾಗಗಳಲ್ಲಿನ ಸ್ವಚ್ಛತೆ ಮತ್ತು ಮಂದಿರದಲ್ಲಿ ಸಿಬ್ಬಂದಿ ಆಯೋಜನೆ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಅವರು, ಆರಂಭದಲ್ಲಿ ಒಮ್ಮೆಲೆ ಎಲ್ಲರನ್ನೂ ಮಂದಿರದ ಒಳಕ್ಕೆ ಬಿಡದೆ ಪ್ರಾಯೋಗಿಕವಾಗಿ 15 ದಿನ ಸ್ಥಳೀಯರಿಗೆ ಮಾತ್ರ ಅವಕಾಶ ನೀಡಲಾಗಿರುವುದು ಉತ್ತಮ ಕ್ರಮವಾಗಿದೆ. ಮುಂದೆ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಆ ವೇಳೆ ಮಂದಿರದಲ್ಲಿ ಸುರಕ್ಷಾ ವ್ಯವಸ್ಥೆಯನ್ನು ಹೆಚ್ಚಿಸುವ ಅಗತ್ಯವಿದೆ. ಯಾವುದೇ ಕಾರಣಕ್ಕೂ ಸರ್ಕಾರ ಸೂಚಿಸಿರುವ ಸುರಕ್ಷಾ ಕ್ರಮಗಳಲ್ಲಿ ನ್ಯೂನತೆ ಬಾರದಂತೆ ನೋಡಿಕೊಳ್ಳ ಬೇಕು. ಮಾಸ್ಕ್, ಸ್ಕ್ರೀನಿಂಗ್ ಮತ್ತು ಪರಸ್ಪರ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪರಿಸ್ಥಿತಿಯನ್ನು ಅನುಸರಿಸಿ ಮುಂದೆ ಸರ್ಕಾರ ಅಗತ್ಯ ಸಲಹೆ- ಸೂಚನೆಗಳನ್ನು ಒದಗಿಸಲಿದೆ ಎಂದು ಹೇಳಿದರು.

ಮಂದಿರದ ಆಡಳಿತ ಕಾರ್ಯದರ್ಶಿ ಜಿ.ಕೆ. ಹೆಗಡೆ ಅವರು, ಆಡಳಿತ ಮಂಡಳಿ ತೆಗೆದುಕೊಂಡ ವಿವಿಧ ಉಪಕ್ರಮಗಳನ್ನು ವಿವರಿಸಿದರು. ತಹಸೀಲ್ದಾರ್ ಮೇಘರಾಜ ನಾಯ್ಕ ಇದ್ದರು.

ಸೀಮಿತ ಸಮಯ: ಮಂದಿರ ನಿತ್ಯ ಬೆಳಗ್ಗೆ 6 ರಿಂದ 9.30ರ ತನಕ ಹಾಗೂ ಸಂಜೆ 5 ರಿಂದ 6ರವರೆಗೆ ಮಾತ್ರ ಭಕ್ತರಿಗೆ ತೆರೆದಿರುತ್ತದೆ.