ಕಂಪ್ಲಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ತನ್ನ ದೌರ್ಬಲ್ಯ ಮುಚ್ಚಿಕೊಳ್ಳಲು ದಕ್ಷ ಅಧಿಕಾರಿ, ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರನ್ನು ಅಮಾನತುಗೊಳಿಸಿದೆ ಎಂದು ವಾಲ್ಮೀಕಿ ಜಗದ್ಗುರು ಡಾ.ಪ್ರಸನ್ನಾನಂದಪುರಿ ಸ್ವಾಮೀಜಿ ಆರೋಪಿಸಿದರು.
ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ರಾಜ್ಯ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ವಾಲ್ಮೀಕಿ ಸಮುದಾಯದ ನೌಕರರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಸೋಮವಾರ ಮಾತನಾಡಿದರು. ಸಾಂಸ್ಕೃತಿಕ ನಾಯಕರಿಗೆ ದೊರೆಯಬೇಕಾದ ಮಾನ್ಯತೆ ದೊರಕಿಲ್ಲ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಮೆ ಪ್ರತಿಷ್ಠಾಪಿಸಿ, ವಾಲ್ಮೀಕಿ ಮಹರ್ಷಿಯನ್ನು ಕಡೆಗಣಿಸಲಾಗಿದೆ. ಸಮುದಾಯಕ್ಕೆ ಧಕ್ಕೆಯಾದಾಗ ಸಂಘಟಿತರಾಗಬೇಕು ಎಂದು ಸಲಹೆ ನೀಡಿದರು.
ಶಾಸಕ ಜೆ.ಎನ್.ಗಣೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಾಲ್ಮೀಕಿ ಸಮುದಾಯದಲ್ಲಿ ಜನಿಸಿದ್ದರಿಂದ ನಾನು ಶಾಸಕನಾಗಲು ಸಾಧ್ಯವಾಗಿದೆ. ಪಟ್ಟಣದಲ್ಲಿ ಎಸ್ಟಿ ಹಾಸ್ಟೆಲ್ ಆರಂಭಕ್ಕೆ ಆರು ಕೋಟಿ ರೂ. ಮೀಸಲಿರಿಸಿದೆ. ಅಟಲ್ ಬಿಹಾರಿ ವಾಜಪೇಯಿ ಶಾಲೆ ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ. 50 ಲಕ್ಷ ರೂ. ವೆಚ್ಚದಲ್ಲಿ ಕಂಪಿಲರಾಯ ಹಾಗೂ ಮದಕರಿನಾಯಕ ವೃತ್ತ ನಿರ್ಮಿಸಲಾಗುವುದು ಎಂದರು.
ಮಹಾಸಭಾ ತಾಲೂಕು ಅಧ್ಯಕ್ಷ ನೀರಗಂಟಿ ವೀರೇಶ ಅಧ್ಯಕ್ಷತೆ ವಹಿಸಿದ್ದರು. ಪುರಸಭಾಧ್ಯಕ್ಷ ಭಟ್ಟ ಪ್ರಸಾದ, ಪ್ರಮುಖರಾದ ಎನ್.ರಾಮಾಂಜನೇಯಲು, ಬಿ.ನಾರಾಯಣಪ್ಪ, ಬಿ.ರಾಮಾಂಜಿನಿ, ಪೈಲ್ವಾನ್ ವೀರೇಶ್, ಬಿ.ಅಂಬಣ್ಣ, ವಾಲ್ಮೀಕಿ ಈರಣ್ಣ, ಎ.ಹುಲುಗಪ್ಪ, ಬಿ.ಬಸಪ್ಪ, ರಾಮಮೂರ್ತಿ ಇತರರಿದ್ದರು.