ಚನ್ನರಾಯಪಟ್ಟಣ.: ರಸ್ತೆ ಸುರಕ್ಷತಾ ವಿಚಾರದಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವ ಕುರಿತು ಪ್ರತಿಯೊಬ್ಬರೂ ಆತ್ಮ ಶೋಧನೆ ಮಾಡಿಕೊಳ್ಳಬೇಕು. ಇನ್ನೊಬ್ಬರ ಜೀವಕ್ಕೂ ಬೆಲೆ ಇದೆ ಎನ್ನುವ ವಾಸ್ತವವನ್ನು ಅರಿತುಕೊಂಡು ರಸ್ತೆಯಲ್ಲಿ ವಾಹನ ಚಲಾವಣೆ ಮಾಡಬೇಕು ಎಂದು ಚನ್ನರಾಯಪಟ್ಟಣ ಕೆಎಸ್‌ಆರ‌್ಟಿಸಿ ಘಟಕ ವ್ಯವಸ್ಥಾಪಕಿ ಶಾಜೀಯ ಭಾನು ಅಭಿಪ್ರಾಯಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಸನ ವಿಭಾಗದಡಿ, ಪಟ್ಟಣದ ಬಸ್‌ನಿಲ್ದಾಣದಲ್ಲಿ ಸಾರಿಗೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಜನಸಾಮಾನ್ಯರಲ್ಲಿ ರಸ್ತೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವುದು. ರಸ್ತೆ ಅಪಘಾತ, ಸಾವು-ನೋವುಗಳ ಬಗ್ಗೆ ಅವರ ಗಮನಕ್ಕೆ ತರುವುದು ಹಾಗೂ ರಸ್ತೆ ನಿಯಮಗಳನ್ನು ಪಾಲಿಸುವಂತೆ ಪ್ರತಿಯೊಬ್ಬರಲ್ಲೂ ಶಿಸ್ತು ಮೂಡಿಸುತ್ತಿರುವುದು ಶ್ಲಾಘನೀಯವೆಂದರು.
ಸರ್ಕಾರದ ಆದೇಶದಂತೆ ಪ್ರತಿವರ್ಷವೂ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತದೆ. ಒಂದು ತಿಂಗಳ ಕಾಲ ಕಾರ್ಯಕ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಸ್ತೆ ನಿಯಮಗಳ ಕುರಿತು ಚಾಲಕರಿಗೆ ಮತ್ತು ವಾಹನ ಮಾಲೀಕರಿಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಅನೇಕ ಅಪಘಾತಗಳು ಮಾನವ ತಪ್ಪುಗಳಿಂದಲೇ ಆಗುತ್ತವೆ. ಅಮಾಯಕರು ಜೀವ ಕಳೆದುಕೊಂಡು ಅವಲಂಬಿಸಿರುವವರನ್ನು ಬೀದಿಪಾಲು ಮಾಡುತ್ತಾರೆ. ಚಾಲಕರು ವಾಹನದಲ್ಲಿ ಕುಳಿತ ಕೂಡಲೇ ತಮ್ಮ ಕುಟುಂಬ ಮತ್ತು ಅವಲಂಬಿತರನ್ನು ನೆನಪಿಸಿಕೊಳ್ಳಬೇಕು. ಎಲ್ಲಕಿಂತ ಜೀವ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕುಡಿದು ವಾಹನ ಚಾಲನೆ ಮಾಡುವುದು, ಮೊಬೈಲ್‌ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು ಎಂದು ಸೂಚಿಸಿದರು.
ಪ್ರಾದೇಶಿಕ ಸಾರಿಗೆ ಅಧೀಕ್ಷಕ ಸಿ.ಎಸ್.ಶರತ್‌ಚಂದ್ರ ಮಾತನಾಡಿ, ಎಲ್ಲ ವಾಹನ ಚಾಲಕರು ಹಾಗೂ ಮಾಲೀಕರು ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳ ಒಂದು ಸೆಟ್ ಅನ್ನು ವಾಹನದಲ್ಲಿ ಜೋಪಾನವಾಗಿ ಇಟ್ಟಿರಬೇಕು. ದಾಖಲೆಗಳು ಇಲ್ಲದೆ ರಸ್ತೆಗೆ ಬರಬಾರದು. ಚಾಲನಾ ಪರವಾನಗಿ, ವಾಹನದ ಆರ್.ಸಿ, ವಿಮೆ ದಾಖಲೆ, ಎಮಿಷನ್ ಪ್ರಮಾಣ ಪತ್ರ ಮತ್ತಿತರ ವಿವರ ಹೊಂದಿರಬೇಕು. ಕಾನೂನುಗಳು ಬದಲಾಗಿದ್ದು ನಿಯಮಗಳ ಉಲ್ಲಂಘನೆಗೆ ದಂಡ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಗೋನಾ ಸ್ವಾಮಿ ಎಂಟರ್ ಪ್ರೈಸಸ್ ಕಲಾ ಕೂಟದ ಕಲಾವಿದರು ರಸ್ತೆ ಸುರಕ್ಷತೆ ಬೀದಿ ನಾಟಕ ಪ್ರದರ್ಶನ ವಾಹನ ಸುರಕ್ಷತೆ, ಅಪಘಾತ ಸಂಭವಿಸಿದಾಗ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ರಸ್ತೆ ಸುರಕ್ಷಿತ ಹಾಗೂ ಕಾನೂನಿನ ಬಗ್ಗೆ ಡಿಸ್‌ಪ್ಲೇ ಬ್ಯಾನರ್‌ಗಳು, ಸೂಚನಾ ಫಲಕಗಳು, ಡೊಳ್ಳು ಕುಣಿತ, ಭಿತ್ತಿಪತ್ರಗಳ ಬಳಕೆ ವಿವಿಧ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ನಗರ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್‌ಸ್ಪೆಕ್ಟರ್ ನಂಜುಂಡೇಗೌಡ, ಸಂಚಾರಿ ನಿರೀಕ್ಷಕ ಕೃಪಾಕರ್.ಕೆ.ಎಲ್. ಸಂಚಾರಿ ನಿಯಂತ್ರಕರಾದ ಪ್ರಸನ್ನ, ಚಂದ್ರಶೇಖರ್, ಉಷಾ,ಇತರರು ಉಪಸ್ತಿತರಿದ್ದರು