ಬಾಗೇಪಲ್ಲಿ: ಸರ್ಕಾರದ ಅನುಮತಿ ಇಲ್ಲದಿದ್ದರೂ ಪ್ರವಾಸಿ ಮಂದಿರದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರೂ ತಾಲೂಕು ಆಡಳಿತ ಮಾತ್ರ ಮೌನವಾಗಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಲಾಗಿದ್ದು, 200ಕ್ಕೂ ಹೆಚ್ಚು ಮುಖಂಡರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಸಭೆಯಲ್ಲಿ ಪರಸ್ಪರ ಅಂತರವಾಗಲಿ, ಮಾಸ್ಕ್ ಧರಿಸಿರುವುದೂ ಸೇರಿ ಕರೊನಾ ನಿಯಂತ್ರಣದ ಮುಂಜಾಗ್ರತಾ ಕ್ರಮಗಳು ಎಲ್ಲಿಯೂ ಪಾಲನೆಯಾಗಲಿಲ್ಲ.
ನಿಯಮ ಉಲ್ಲಂಸಿ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ರಾಜಕೀಯ ಪಕ್ಷದ ಸಭೆ ನಡೆಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕಾಗಿರುವ ಸರ್ಕಾರಿ ಅಧಿಕಾರಿಗಳು ಹಿಂದೇಟು ಹಾಕಿದ್ದು, ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಸ್ಥಳಕ್ಕೆ ಬಾರದ ತಹಸೀಲ್ದಾರ್: ಅನುಮತಿ ಪಡೆಯದೆ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರು ಸಭೆ ನಡೆಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ಸಾರ್ವಜನಿಕರು ದೂರು ಸಲ್ಲಿಸಿದ್ದರು. ನಿಯಮ ಉಲ್ಲಂಘಿಸಿ ಸಭೆ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವಂತೆ ತಹಸೀಲ್ದಾರ್ ಎಂ.ನಾಗರಾಜು ಅವರಿಗೆ ಡಿಸಿ ಸೂಚಿಸಿದ್ದರು ಎನ್ನಲಾಗಿದೆ. ಆದರೆ ಸಭೆ ಮುಗಿಯುವವರೆಗೂ ತಹಸೀಲ್ದಾರ್ ಪ್ರವಾಸಿ ಮಂದಿರತ್ತ ಸುಳಿಯಲಿಲ್ಲ.
ಬಾಗೇಪಲ್ಲಿಯ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗೆ ಕರೊನಾ ದೃಢಪಟ್ಟಿದೆ, ಶುಕ್ರವಾರದಿಂದ ಮೂರು ದಿನ ಇಲಾಖೆ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೋಂ ಕ್ವಾರಂಟೈನ್‌ನಲ್ಲಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಇಲಾಖೆಯಿಂದ ಅನುಮತಿ ನೀಡಿಲ್ಲ, ರಾಜಕೀಯ ಪಕ್ಷದ ಸಭೆಗಳಿಗೆ ಅನುಮತಿ ನೀಡಲು ಅವಕಾಶವೇ ಇಲ್ಲ. ರಾಮಲಿಂಗಾರೆಡ್ಡಿ, ಎಇಇ ಲೋಕೋಪಯೋಗಿ ಇಲಾಖೆ ಬಾಗೇಪಲ್ಲಿ. ಕರೊನಾ ಸಮಯದಲ್ಲಿ ಗುಂಪು ಸೇರುವುದೇ ತಪ್ಪು, ಆದರೂ ರಾಜಕೀಯ ಸಭೆ ನಡೆಸುವುದು ಕಾನೂನಿಗೆ ವಿರೋಧ. ಸಾಮಾಜಿಕ ಜವಾಬ್ದಾರಿಯಿಂದ ನಿಯಮ ಉಲ್ಲಂಘಿಸಿ ಸಭೆ ನಡೆಸಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ. ಮಂಜುನಾಥ್, ಕಾರ್ಯಪಾಲಕ ಅಭಿಯಂತ, ಲೋಕೋಪಯೋಗಿ ಇಲಾಖೆ ಚಿಕ್ಕಬಳ್ಳಾಪುರ