ಎನ್.ಆರ್.ಪುರ: ಮಾಜಿ ಸಚಿವ ಡಿ.ಎನ್.ಜೀವರಾಜ್ ಮೆಣಸೂರು ಗ್ರಾಮದ ಸ.ನಂ.121 ರಲ್ಲಿ ವ್ಯವಸಾಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ 6 ಎಕರೆ ವಸತಿ ಬಡಾವಣೆಗೆ 13 ವರ್ಷದಿಂದ ಕಂದಾಯ ಕಟ್ಟದೆ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಸದಸ್ಯ ಎಂ.ಆರ್.ರವಿಶಂಕರ್ ಆರೋಪಿಸಿದರು.
ಮಂಗಳವಾರ ಬ್ಲಾಕ್ ಕಾಂಗ್ರೆಸ್ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ದಾಖಲೆ ಬಿಡುಗಡೆ ಮಾಡಿ ಮಾತನಾಡಿ, ಕೃಷಿ ಜಮೀನು ವ್ಯವಸಾಯೇತರ ಜಮೀನಾಗಿ ಪರಿವರ್ತನೆಯಾದರೆ 1 ಚದರಡಿ ಲೆಕ್ಕದಲ್ಲಿ ಕಂದಾಯ ಕಟ್ಟಬೇಕಾಗುತ್ತದೆ. ಇದೇ ಜಾಗದಲ್ಲಿದ್ದ ನಕಾಶೆ ಕಂಡ ಕೆರೆ ಕಟ್ಟೆಯನ್ನು ಒತ್ತುವರಿ ಮಾಡಿ ಕೆರೆ ಮುಚ್ಚಿ ಕಾಂಕ್ರೀಟ್ ರಸ್ತೆ ಮಾಡಿದ್ದಾರೆ. ಸರ್ಕಾರಿ ಜಾಗದಲ್ಲಿ ಎರಡು ಮನೆಗಳನ್ನು ಕಟ್ಟಿದ್ದಾರೆ ಎಂದು ಆರೋಪಿಸಿದರು.
ಕಂದಾಯ ಬಾಕಿ ಇಟ್ಟುಕೊಂಡರೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಚುನಾವಣಾ ಆಯೋಗಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕಾಗಿದೆ ಎಂದರು.
ಕೊಪ್ಪದಲ್ಲಿ ಬಿಜೆಪಿಯಿಂದ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮಿನಿ ವಿಧಾನ ಸೌಧ ಸೋರುತ್ತಿದೆ ಎಂದು ಹೇಳಿದ್ದಾರೆ. ಇದನ್ನು ಬಿಜೆಪಿ ಶಾಸಕರೇ ಕಟ್ಟಿಸಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರುಬೈಲು ನಟರಾಜ್ ಮಾತನಾಡಿ, ಶಾಸಕ ಟಿ.ಡಿ.ರಾಜೇಗೌಡ ಅವರ ವಿರುದ್ಧ ಬಿಜೆಪಿ ಮುಖಂಡರು ಸುಳ್ಳು ಕೇಸು ದಾಖಲಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಸಂಸದರು, ವಿಧಾನ ಪರಿಷತ್ ಸದಸ್ಯರು ಇದ್ದಾರೆ. ಅವರನ್ನು ಬಳಸಿಕೊಂಡು ಅಭಿವೃದ್ಧಿ ಮಾಡುವುದನ್ನು ಬಿಟ್ಟು ಶಾಸಕರ ವಿರುದ್ಧ ಸುಳ್ಳು ಕೇಸು ದಾಖಲಿಸುತ್ತಿದ್ದಾರೆ. ಮುಂದೆ ಇದೇ ರೀತಿ ಮಾಜಿ ಸಚಿವರು, ಬಿಜೆಪಿ ಮುಖಂಡರು ಸುಳ್ಳು ಪ್ರಚಾರ ಮಾಡಿದರೆ ಕಾಂಗ್ರೆಸ್ ಹೋರಾಟಕ್ಕೆ ಇಳಿಯಲಿದೆ ಎಂದು ಎಚ್ಚರಿಸಿದರು.
ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ನಾನು ಕೊಪ್ಪದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡದೆ ಇರುವ ಪದಗಳನ್ನು ಬಳಸಿಕೊಂಡು ಬಿಜೆಪಿ ಮುಖಂಡರು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿ, ಪಟ್ಟಣ ಪಂಚಾಯಿತಿ ಅಧ್ಯಕ್ಷನಾಗಿ ಅಭಿವೃದ್ಧಿ ಮಾಡಿದ್ದೇನೆ. ನಾನು ವೈಯಕ್ತಿಕವಾಗಿ ಯಾರ ಬಗ್ಗೆಯೂ ಟೀಕೆ ಮಾಡಿಲ್ಲ. ನನ್ನ ಮಾತಿನಿಂದ ದಲಿತರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಮನು ಮಾತನಾಡಿ, ಕೊಪ್ಪದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾಜಿ ಸಚಿವರು ಮಾತನಾಡುವಾಗ ಕೆಲವರನ್ನು ನಾಯಿಗೆ ಹೋಲಿಸಿದ್ದಾರೆ. ಇಂಥ ಪದ ಬಳಕೆ ಮಾಜಿ ಸಚಿವರಿಗೆ ಶೋಭೆ ತರುವುದಿಲ್ಲ. ನಾನು 2004 ರಿಂದ 2013ರವರೆಗೆ ಬಿಜೆಪಿಯಲ್ಲಿದ್ದು ಮಾಜಿ ಸಚಿವರ ಜತೆ ಕೆಲಸ ಮಾಡಿದ್ದೇನೆ. 2013ರ ನಂತರ ಅವರ ಸಂಪರ್ಕದಲ್ಲಿ ಇಲ್ಲ. ಎಲ್ಲ ಬಿಜೆಪಿ ಕಾರ್ಯಕರ್ತರ ಶ್ರಮದಿಂದಲೇ ಅವರು ಶಾಸಕರಾಗಿ, ಮಂತ್ರಿಯಾಗಿದ್ದಾರೆ. ಈಗ ಅನೇಕ ಬಿಜೆಪಿ ಮುಖಂಡರು ಬಿಜೆಪಿಯಿಂದ ಹೊರಗೆ ಬಂದಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರಾದ ಇ.ಸಿ.ಜೋಯಿ, ಎಸ್.ಡಿ.ರಾಜೇಂದ್ರ, ಬೆನ್ನಿ, ಮಾಳೂರುದಿಣ್ಣೆ ರಮೇಶ್, ರತನ್ ಗೌಡ, ಬಿ.ಎಸ್.ಸುಬ್ರಹ್ಮಣ್ಯ, ಜುಬೇದಾ, ಮುನೋಹರ್ ಪಾಷಾ, ನಂದೀಶ್, ದೇವಂತಗೌಡ, ಮಹೇಶ್ ಇತರರಿದ್ದರು.