ಜಿಲ್ಲೆ

ಸರ್ಕಾರ ವಿರುದ್ಧ ನಸ್೯ ಸಮರ

ರೇವಣಸಿದ್ದಪ್ಪ ಪಾಟೀಲ್ ಬೀದರ್

ವೇತನ ಪರಿಷ್ಕರಣೆ ಸಂಬಂಧ ಪ್ರತಿಭಟನಾನಿರತ ವೈದ್ಯರ ಜತೆ ಸಂಧಾನ ಸಭೆ ನಡೆಸಿ ಅವರ ಬೇಡಿಕೆಗೆ ತಕ್ಷಣ ಸ್ಪಂದಿಸಿರುವ ರಾಜ್ಯ ಸರ್ಕಾರ, ಶುಶ್ರೂಷ ಅಧಿಕಾರಿ (ನಸ್೯)ಗಳ ಬೇಡಿಕೆ ಈಡೇರಿಕೆ ವಿಷಯ ಬಂದಾಗ ತೆಪ್ಪಗೆ ಕುಳಿತಿದೆ. ಸರ್ಕಾರದ ಈ ತಾರತಮ್ಯ ನೀತಿಗೆ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿರುವ ನಸ್೯ಗಳು ಹೋರಾಟಕ್ಕೆ ಅಣಿಯಾಗಿದ್ದಾರೆ.

ಆರೋಗ್ಯ ಇಲಾಖೆಯಲ್ಲಿರುವ ಶುಶ್ರೂಷ ಅಧಿಕಾರಿಗಳ ಪದೋನ್ನತಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮಾಡುತ್ತಿರುವ ಅನ್ಯಾಯ ಸರಿಪಡಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಒಂದು ವಾರದ ಗಡುವು ನೀಡಲಾಗಿತ್ತು. ಈ ಗಡುವು ಮುಗಿದು ವಾರವಾಗುತ್ತಿದ್ದರೂ ಬಾಯಿ ಬಿಡದ ಆರೋಗ್ಯ ಇಲಾಖೆ ವಿರುದ್ಧ ನಸ್೯ಗಳು ಸಿಟ್ಟಿಗೆದಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ಧೋರಣೆ ಬಿಡದಿದ್ದರೆ ಸರ್ಕಾರದ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಗುಡುಗಿದ್ದಾರೆ.

ವೈದ್ಯರ ಮುಷ್ಕರಕ್ಕೆ ಮುನ್ನವೇ ಶುಶ್ರೂಷ ಅಧಿಕಾರಿಗಳ ಪದೋನ್ನತಿ ಸೇರಿ ವಿವಿಧ ಬೇಡಿಕೆ ಮಂಡಿಸಿ ಆರೋಗ್ಯ ಇಲಾಖೆಗೆ ಎಚ್ಚರಿಕೆ ನೀಡಿ ಗಡುವು ವಿಧಿಸಲಾಗಿತ್ತು. ಆರೋಗ್ಯ ಇಲಾಖೆ ವೈದ್ಯರ ವೇತನ ಪರಿಷ್ಕರಣೆ ಬೇಡಿಕೆಗೆ ಸ್ಪಂದಿಸಿದೆ. ಆದರೆ ಶುಶ್ರೂಷ ಅಧಿಕಾರಿಗಳ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕರೊನಾ ವಾರಿಯರ್ಸ್ ಗಳಾಗಿ ಹಗಲಿರುಳು ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ನಮ್ಮ ಬಗ್ಗೆ ಏಕೆ ತಾತ್ಸಾರ ಧೋರಣೆ ಎಂಬುದು ನಸ್೯ಗಳ ಪ್ರಶ್ನೆಯಾಗಿದೆ.

ರಾಜ್ಯದಲ್ಲಿ ಸುಮಾರು 15 ಸಾವಿರ ಶುಶ್ರೂಷ ಅಧಿಕಾರಿಗಳು ಕರ್ತವ್ಯದಲ್ಲಿದ್ದಾರೆ. ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಸರ್ಕಾರ ತಾರತಮ್ಯ ನೀತಿ ಕೈಬಿಟ್ಟು ಬೇಡಿಕೆ ಈಡೇರಿಸಲು ಮುಂದಾಗಬೇಕು. ಸರ್ಕಾರದ ನಿರ್ಲಕ್ಷೃ ಧೋರಣೆ ಸಂಬಂಧ ಶೀಘ್ರ ಸಂಘದ ಸಭೆ ನಡೆಸಿ ಮೊದಲ ಹಂತವಾಗಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲಾಗುವುದು. ಇದಕ್ಕೂ ಮಣಿಯದಿದ್ದರೆ ಕೆಲಸ ಬಹಿಷ್ಕರಿಸಿ ಉಗ್ರ ಸ್ವರೂಪದ ಹೋರಾಟ ಮಾಡುವುದು ಅನಿವಾರ್ಯ ಎಂದು ಶುಶ್ರೂಷಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ರಾಜಕುಮಾರ ಮಾಳಗೆ ಎಚ್ಚರಿಸಿದ್ದಾರೆ. ವೈದ್ಯರ ಬೇಡಿಕೆಗೆ ತಕ್ಷಣ ಸ್ಪಂದಿಸಿ ಮುಷ್ಕರಕ್ಕೆ ಬ್ರೇಕ್ ಹಾಕಿದ್ದ ಸರ್ಕಾರಕ್ಕೆ ಈಗ ನಸ್೯ಗಳ ಹೋರಾಟದ ಬಿಸಿ ತಟ್ಟುವ ಸಾಧ್ಯತೆಗಳಿವೆ.

  • ಹಲವು ಬೇಡಿಕೆ ಮಂಡನೆ…
  • ಇತ್ತೀಚೆಗೆ ಆರೋಗ್ಯ ಇಲಾಖೆ ಶುಶ್ರೂಷ ಅಧಿಕಾರಿಗಳಿಗೆ ಪದೋನ್ನತಿ ನೀಡಲಾಗಿದೆ. ಆದರೆ ರಾಜ್ಯದ ಕೆಲ ಸ್ವಾಯತ್ತ ಸಂಸ್ಥೆಗಳು(ಸರ್ಕಾರಿ ವೈದ್ಯ ಕಾಲೇಜುಗಳು) ಪದೋನ್ನತಿ ಪಡೆದ ಶುಶ್ರೂಷ ಅಧಿಕಾರಿಗಳಿಗೆ ವರದಿ ಮಾಡಿಕೊಳ್ಳಲು ಬಿಡುತ್ತಿಲ್ಲ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನಡುವಿನ ಸಮನ್ವಯ ಕೊರತೆಯಿಂದ ಶುಶ್ರೂಷ ಅಧಿಕಾರಿಗಳು ಪರದಾಡಬೇಕಿದೆ. ಇದನ್ನು ಸರಿಪಡಿಸಬೇಕು ಎಂಬುದು ಶುಶ್ರೂಷ ಅಧಿಕಾರಿಗಳ ಸಂಘದ ಪ್ರಮುಖ ಬೇಡಿಕೆ. ಕೇಂದ್ರ ಸರ್ಕಾರಿ ಶುಶ್ರೂಷ ಅಧಿಕಾರಿಗಳಿಗೆ ನೀಡುತ್ತಿರುವ ಮಾದರಿಯಲ್ಲಿ ರಾಜ್ಯ ಸಕರ್ಾರವೂ 7ನೇ ವೇತನ ಆಯೋಗದ ಆರ್ಥಿಕ ಸೌಲಭ್ಯ ನೀಡಬೇಕು. ವಾರ್ಷಿಕ 48-52 ಪತ್ರಾಂಕಿತ ರಜೆಗಳಲ್ಲಿ ಕಾರ್ಯನಿರ್ವಹಿಸಿದಕ್ಕೆ ಪ್ರಸ್ತುತ ಪಡೆಯುತ್ತಿರುವ 15 ದಿನದ ವಾರ್ಷಿಕ ವೇತನ ಬದಲಾಗಿ 30 ದಿನದ ವಾರ್ಷಿಕ ವೇತನ ಕೊಡಬೇಕು. ಪೊಲೀಸ್ ಸಿಬ್ಬಂದಿಗೆ ನೀಡುತ್ತಿರುವಂತೆ ಸೌಲಭ್ಯ ಕಲ್ಪಿಸಬೇಕು. ಕರೊನಾ ವಾರಿಯರ್ಸ್ಗಳಾಗಿ ಹಗಲಿರುಳು ಕಾರ್ಯನಿರ್ವಹಿಸುತ್ತಿರುವ ಶುಶ್ರೂಷ ಅಧಿಕಾರಿಗಳಿಗೆ ಮಾಸಿಕ 25 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದು ಸೇರಿ ಹಲವು ಬೇಡಿಕೆಗಳನ್ನು ಮಂಡಿಸಲಾಗಿದೆ.
ವೇತನ ಪರಿಷ್ಕರಣೆ ಸಂಬಂಧ ವೈದ್ಯರ ಹೋರಾಟಕ್ಕೆ ಆರೋಗ್ಯ ಇಲಾಖೆ ಸ್ಪಂದಿಸಿರುವುದು ಸ್ವಾಗತಾರ್ಹ. ಆದರೆ ಅದೇ ಇಲಾಖೆಯಲ್ಲಿರುವ ಶುಶ್ರೂಷ ಅಧಿಕಾರಿಗಳ ಬೇಡಿಕೆಗೆ ಕಡೆಗಣಿಸುತ್ತಿರುವುದು ಸರಿಯಲ್ಲ. ಸರ್ಕಾರ ನಮ್ಮ ಬೇಡಿಕೆಗೆ ನಿರ್ಲಕ್ಷಿಸಿದರೆ ಶೀಘ್ರದಲ್ಲಿ ರಾಜ್ಯವ್ಯಾಪಿ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡಲಾಗುವುದು. ನಂತರ ಸಭೆ ನಡೆಸಿ ಉಗ್ರ ಹೋರಾಟದ ಕುರಿತು ರೂಪುರೇಷೆ ಸಿದ್ಧಪಡಿಸಲಾಗುವುದು.| ರಾಜಕುಮಾರ ಮಾಳಗೆಸರ್ಕಾರಿ ಶುಶ್ರೂಷಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ