ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿದ ಪಟ್ಟಿಯಿಂದ ಜಿಲ್ಲೆಯ ಅಳ್ನಾವರ, ಅಣ್ಣಿಗೇರಿ, ಕಲಘಟಗಿ ತಾಲೂಕುಗಳನ್ನು ಬಿಡಲಾಗಿದೆ. ಹೀಗಾಗಿ ಸರ್ಕಾರ ಮರು ಸಮೀಕ್ಷೆ ನಡೆಸಿ ಈ ತಾಲೂಕುಗಳನ್ನೂ ಬರ ಪೀಡಿತ ಎಂದು ಘೋಷಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಪಿ.ಎಚ್. ನೀರಲಕೆರಿ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಣ್ಣಿಗೇರಿ, ಅಳ್ನಾವರ, ಕಲಘಟಗಿ ತಾಲೂಕಿನ ಕೆಲ ಭಾಗದಲ್ಲಿ ಮಾತ್ರ ಮಳೆಯಾಗಿದೆ. ಇದನ್ನೇ ಪರಿಗಣಿಸಿ ಬರ ಪಟ್ಟಿಯಿಂದ ಬಿಡಲಾಗಿದೆ. ಸಾಕಷ್ಟು ರೈತರು ಬಿತ್ತನೆ ಮಾಡಿ ಮಳೆ ಇಲ್ಲದೆ ಹಾನಿ ಅನುಭವಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕರು, ಸಚಿವರು ಹಾಗೂ ಅಧಿಕಾರಿಗಳು ಪರಿಶೀಲಿಸಿ ಸರ್ಕಾರದ ಗಮನಕ್ಕೆ ತರಬೇಕು. ಅಲ್ಲದೆ ಈ ವಿಷಯದಲ್ಲಿ ಸೂಕ್ತ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸುವಲ್ಲಿ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಕಳುಹಿಸಿದ ಬರ ಪೀಡಿತ ಪ್ರದೇಶಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಶೀಘ್ರ ಪರಿಶೀಲಿಸಿ ರಾಜ್ಯದ ಬರ ಪೀಡಿತ ತಾಲೂಕುಗಳಿಗೆ ಎನ್‌ಡಿಆರ್‌ಎಫ್ ನಿಯಮಾನುಸಾರ ಅನುದಾನ ಬಿಡುಗಡೆ ಮಾಡಬೇಕು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಮ್ಮ ಕ್ಷೇತ್ರದ ವ್ಯಾಪ್ತಿಯ ಹೊಲಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಬಳಿಕ ಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದರು.