ಧಾರವಾಡ: ಬೆಳಗಾವಿ ಪೀರನವಾಡಿಯ ಪುತ್ಥಳಿ ಗಲಾಟೆ ವಿಚಾರದಲ್ಲಿ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುತ್ಥಳಿ ವಿಚಾರವಾಗಿ ವಿವಾದ ಸೃಷ್ಟಿಸಿದ್ದು ದುರದೃಷ್ಟಕರ. ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜ ವೀರಯೋಧರು. ಸಂಗೊಳ್ಳಿ ರಾಯಣ್ಣನ ತ್ಯಾಗ, ಬಲಿದಾನ ದೊಡ್ಡದು. ಅಂತಹ ವೀರ ಒಂದು ಕಡೆ, ದೇಶವನ್ನು ಒಟ್ಟಾಗಿ ಕಟ್ಟಿದ ಶಿವಾಜಿ ಮಹಾರಾಜ ಇನ್ನೊಂದು ಕಡೆ. ಇವರಿಬ್ಬರೂ ದೇಶದ ಹೆಮ್ಮೆ ಮತ್ತು ವಿಶ್ವ ಮಾನವರು. ಇಂತಹವರ ವಿಚಾರದಲ್ಲಿ ಪುತ್ಥಳಿ ರಾಜಕಾರಣ ನಡೆಯಬಾರದು ಎಂದರು.
ನಮ್ಮ ದೇಶಕ್ಕೆ ಇಬ್ಬರೂ ವೀರ ಪುತ್ರರು. ಪುತ್ಥಳಿ ಸ್ಥಾಪನೆ ವಿಷಯದಲ್ಲಿ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು. ಸಂಬಂಧಪಟ್ಟವರು ಶಾಂತ ರೀತಿಯಿಂದ ಕುಳಿತು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ ಅವರು, ನಾನು ಎಂಇಎಸ್ ಕೃತ್ಯಗಳನ್ನು ಎಂದಿಗೂ ವಿರೋಧಿಸುತ್ತಲೇ ಬಂದಿದ್ದೇನೆ. ಈಗ ನಡೆಸಿರುವ ಕೃತ್ಯವನ್ನೂ ಖಂಡಿಸುತ್ತೇನೆ ಎಂದರು.