ಕೆ.ಎಂ.ದೊಡ್ಡಿ: ಮನ್ಮುಲ್‌ನಿಂದ ನಂದಿನಿ ಉಪ ಉತ್ಪನ್ನಗಳನ್ನು ಉತ್ಪಾದಿಸುವ ರೀತಿ ತೆಂಗಿನಿಂದ ಹಲವು ಉತ್ಪನ್ನಗಳನ್ನು ತಯಾರಿಸಬಹುದು. ಇದಕ್ಕೆ ಸರ್ಕಾರ ಪ್ರತ್ಯೇಕ ತೆಂಗು ಬೆಳೆಗಾರರ ಕೋ-ಅಪರೇಟಿವ್ ಸೊಸೈಟಿ ಸ್ಥಾಪಿಸಿ ರೈತರ ಹಿತ ಕಾಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಒತ್ತಾಯಿಸಿದರು.
ಇಲ್ಲಿನ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ತೆಂಗು ಅಭಿವೃದ್ಧಿ ಮಂಡಳಿ, ಆತ್ಮಲಿಂಗೇಶ್ವರಿ ತೆಂಗು ಬೆಳೆಗಾರರ ಒಕ್ಕೂಟ, ಮಹದೇಶ್ವರ ತೆಂಗು ಬೆಳೆಗಾರರ ಒಕ್ಕೂಟ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ವಿಶ್ವ ತೆಂಗು ದಿನಾಚರಣೆ ಅಂಗವಾಗಿ ತೆಂಗು ಬೆಳೆ ಆಧುನಿಕ ಸಮಗ್ರ ಬೇಸಾಯ ಕ್ರಮಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ತೆಂಗಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ರೈತ ಸಂಕಷ್ಟ ಅನುಭವಿಸುತ್ತಿದ್ದಾನೆ. ಸರ್ಕಾರ ಈ ಬಗ್ಗೆ ಚಿಂತನೆ ಮಾಡಿ ಸೂಕ್ತ ಮಾರುಕಟ್ಟೆ ನಿರ್ಮಿಸಿ ಉತ್ತಮ ದರ ನಿಗದಿಪಡಿಸಬೇಕು ಎನ್ನುವುದು ರೈತರ ಒತ್ತಾಯವಾಗಿದೆ. ತೆಂಗು ಬೆಳೆಯಿಂದ ಎಳನೀರು ಮಾರಾಟ ಮಾಡಿ ಆರ್ಥಿಕ ಸಬಲರಾಗಲು ಸಹಾಯವಾಗುತ್ತಿದೆ. ಏಷ್ಯಾದ ನಂ.1 ಏಳನೀರು ಮಾರುಕಟ್ಟೆ ಮದ್ದೂರಿನಲ್ಲಿದ್ದು, ಇದರಿಂದ ರೈತರಿಗೆ ವರದಾನವಾಗುತ್ತಿದೆ ಎಂದರು.
ಮಂಡ್ಯದ ತೋಟಗಾರಿಕೆ ಉಪನಿರ್ದೇಶಕಿ ರೂಪಶ್ರೀ ಮಾತನಾಡಿ, ತೆಂಗು ಅಭಿವೃದ್ಧಿ ಸಂಘ ರೈತರ ಜತೆ ಸದಾ ಇರಲಿದೆ. ತೆಂಗಿನ ಗರಿ ಒಣಗುತ್ತಿರುವುದರಿಂದ ಕಪ್ಪು ತಲೆ ಹುಳು ಹಾವಳಿ ತಪ್ಪಿಸಲು ತೋಟಗಾರಿಕೆ ಇಲಾಖೆಯಿಂದ ಒಳ್ಳೆ ಹುಳುಗಳನ್ನು ಬಿಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.
ತೆಂಗಿನಿಂದ ಆಹಾರ, ಇಂಧನ, ಔಷಧ, ಸೌಂದರ್ಯ ವರ್ಧಕ, ಕಟ್ಟಡ ಸಾಮಗ್ರಿ ಸೇರಿದಂತೆ ಹಲವು ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಈ ಬಗ್ಗೆ ರೈತರಿಗೆ ಮಾಹಿತಿ ಕೊರತೆ. ತೆಂಗು ರೈತರ ಬಾಳಿಗೆ ಬೆಳಕಾಗಿ ಆರ್ಥಿಕ ಸಬಲರನ್ನಾಗಿ ಮಾಡಲು ಸಹಕಾರಿಯಾಗುತ್ತಿದೆ. ಇತ್ತೀಚೆಗೆ ತೆಂಗು ಬೆಳೆಯ ಬಗ್ಗೆ ರೈತರು ಜಾಗೃತಗೊಂಡಿದು, ಹೆಚ್ಚು ಆಶಕ್ತಿ ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಭಾರತೀ ಎಜುಕೇಷನ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಟ್ರಸ್ಟಿ ಚಂದೂಪುರ ಪಾಪಣ್ಣ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ರೇಖಾ, ಇಲವಾಲ ತೋಟಗಾರಿಕೆ ಮಹಾವಿದ್ಯಾಲಯ ಪ್ರೊ.ಡಾ.ಜಿ.ಮಂಜುನಾಥ್, ಪ್ರೊ.ಡಾ.ಮುತ್ತುರಾಜು, ಪ್ರೊ.ಆರ್.ಸಿದ್ದಪ್ಪ ಇತರರಿದ್ದರು.