ಬಳ್ಳಾರಿ : ರಾಜ್ಯ ಸರ್ಕಾರ ಜಿಂದಾಲ್ ಸಂಸ್ಥೆಗೆ 3667 ಎಕರೆ ಜಮೀನು ಪರಭಾರೆಗೆ ಅನುಮೋದನೆ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ಮಾಜಿ ಎಂಎಲ್‌ಸಿ ಕೆ.ಸಿ. ಕೊಂಡಯ್ಯ ಹೇಳಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಪ್ರತಿಪಕ್ಷಗಳು ವಿನಾಕಾರಣ ಆರೋಪ ಮಾಡುವವರು, ವಾಸ್ತವಾಂಶವನ್ನು ಅರಿತು ಮಾತನಾಡಬೇಕು. ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರು, 1971ರಲ್ಲಿ ಬಳ್ಳಾರಿಯ ತೋರಣಗಲ್ಲು, ಆಂಧ್ರದ ವಿಶಾಖಪಟ್ಟಣಂ, ತಮಿಳುನಾಡಿನ ಸೇಲಂನಲ್ಲಿ ಮೂರು ಉಕ್ಕು ಕಾರ್ಖಾನೆ ಸ್ಥಾಪಿಸಲು ಶಂಕು ಸ್ಥಾಪನೆ ನೆರವೇರಿಸಿದ್ದರು. ಆಂಧ್ರ, ತಮಿಳುನಾಡಿನಲ್ಲಿ ಆರಂಭವಾದರೂ, ಜಿಲ್ಲೆಯಲ್ಲಿ ಕೈಗಾರಿಕೆ ಆರಂಭವಾಗಿರಲಿಲ್ಲ. 1993-94ರಲ್ಲಿ ಅಂದಿನ ರಾಜ್ಯ ಸರ್ಕಾರ, ಖಾಸಗಿಯವರಿಗೆ ಅನುಮತಿ ನೀಡಲು ನಿರ್ಧರಿಸಿತು. ಅದಕ್ಕಾಗಿ 10 ಸಾವಿರ ಎಕರೆ ಜಮೀನು, ತುಂಗಭದ್ರಾ ಜಲಾಶಯದಿಂದ ನೀರನ್ನು ಸಹ ಕಾಯ್ದಿರಿಸಿತು. ಖನಿಜ ಸರಬರಾಜು ಮಾಡಲು ಎನ್‌ಎಂಡಿಸಿಗೆ ಆದೇಶಿಸಿತು. ಈ ಹಿನ್ನೆಲೆಯಲ್ಲಿ ಜಿಂದಾಲ್ ಸಂಸ್ಥೆಯು ಕೈಗಾರಿಕೆ ಸ್ಥಾಪಿಸಲು ಮುಂದೆ ಬಂದಿದೆ ಎಂದರು. ಶಾಸಕ ಅರವಿಂದ್ ಬೆಲ್ಲದ್, ವಾಸ್ತವಾಂಶ ಅರಿಯದೆ ವಿನಾಕಾರಣ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಹೆಚ್ಚಿನ ಬೆಲೆ ಬಾಳುವ ಜಮೀನನ್ನು ಕಡಿಮೆ ಬೆಲೆಗೆ ಪರಭಾರೆ ಮಾಡಬಾರದು ಎನ್ನುತ್ತಿದ್ದಾರೆ. ಅವರದ್ದು ಕೈಗಾರಿಕೆಗಳು ಇವೆ. ಅವರು ಸಹ ಜಮೀನು ಖರೀದಿಸಿದ್ದಾರೆ. ಇದರ ವಾಸ್ತವಾಂಶವನ್ನು ಅರಿತು ಮಾತನಾಡಬೇಕು ಎಂದು ಕೋರಿದರು. ಜಿಂದಾಲ್ ಸಂಸ್ಥೆಯು ಡಾ. ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಉದ್ಯೋಗ ನೀಡಿದೆ. ಗ್ರೂಪ್ ಎ ವಿಭಾಗದಲ್ಲಿ ಶೇ.61.50 ರಷ್ಟು ನಿಗದಿಯಾಗಿದ್ದು, ಶೇ.65 ರಷ್ಟು ಹುದ್ದೆಗಳನ್ನು ನೀಡಿದೆ. ಗ್ರೂಪ್ ಬಿ ವಿಭಾಗದಲ್ಲಿ ಶೇ.84 ನಿಗದಿಯಲ್ಲಿ ಶೇ.80 ರಷ್ಟು, ಗ್ರೂಪ್ ಸಿ ಶೇ.96.50 ರಲ್ಲಿ ಶೇ.100 ರಷ್ಟು, ಗ್ರೂಪ್ ಡಿ ಶೇ.100ಕ್ಕೆ 100 ರಷ್ಟು ಗುರಿ ಸಾಧಿಸಲಾಗಿದೆ ಎಂದರು. ಪಾಲಿಕೆ ಸದಸ್ಯ ಪಿ.ಗಾದೆಪ್ಪ, ಮುಖಂಡರಾದ ಅಯಾಜ್, ರಾಮರಾಜು ಸೇರಿ ಇತರರಿದ್ದರು.