ಹುಣಸೂರು: ಮೊಬೈಲ್ ತಂತ್ರಜ್ಞಾನದಿಂದಾಗಿ ಛಾಯಾಗ್ರಾಹಕ ವೃತ್ತಿ ತೊಂದರೆಗೆ ಸಿಲುಕಿದ್ದು, ಸರ್ಕಾರ ಛಾಯಾಗ್ರಾಹಕರ ನೆರವಿಗೆ ಬರಬೇಕಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.
ನಗರದ ಮಾ ಪ್ಲಾಜಾ ಆವರಣದಲ್ಲಿ ಸೋಮವಾರ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಆಯೋಜಿಸಿದ್ದ 184ನೇ ರಾಷ್ಟ್ರೀಯ ಛಾಯಾಗ್ರಾಹಕ ದಿನ ಉದ್ಘಾಟಿಸಿ ಮಾತನಾಡಿದರು. ನೂರು ಪದಗಳು ಹೇಳುವ ಕಥೆಯನ್ನು ಒಂದು ಫೋಟೋ ಹೇಳಬಲ್ಲದು ಎನ್ನುವ ಮಾತಿದೆ. ಛಾಯಗ್ರಾಹಕನೊಬ್ಬ ಘಟನೆಯೊಂದರ ವಿವರವನ್ನು ತನ್ನ ಛಾಯಾಚಿತ್ರದ ಕೌಶಲತೆಯಿಂದ ಪರಿಣಾವಕಾರಿಯಾಗಿ ತಿಳಿಸಬಲ್ಲ ಎಂದರು.
ಛಾಯಾಗ್ರಹಣ ವೃತ್ತಿ ಪ್ರಸ್ತುತ ಕಣ್ಮರೆಯಾಗುತ್ತಿದೆ. ಕಾರಣ ಪ್ರತಿಯೊಬ್ಬರ ಬಳಿಯೂ ಗುಣಮಟ್ಟದ ಮೊಬೈಲ್ ಹೊಂದಿರುವುದು. ಇದರಿಂದಾಗಿ ಛಾಯಾಗ್ರಾಹಕ ವೃತ್ತಿ ಅವಲಂಬಿಸಿದ್ದವರು ಅತಂತ್ರ ಸ್ಥಿತಿ ತಲುಪಿದ್ದಾರೆ. ಫೋಟೋ ಜರ್ನಲಿಸ್ಟ್‌ಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ಸರ್ಕಾರ ಛಾಯಾಗ್ರಾಹಕರ ಕುಂದುಕೊರತೆಗಳನ್ನು ಅರಿತು ಅವರ ಒಳಿತಿಗಾಗಿ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದರು.
ಹಿರಿಯ ಛಾಯಾಗ್ರಾಹಕರಾದ ವಿಷ್ಣು ಮತ್ತು ಹೇಮಾ ಜೋಸೆಫ್ ಅವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಛಾಯಾಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ರಾಮಸ್ವಾಮಿ, ಕಾರ್ಯದರ್ಶಿ ಪ್ರದೀಪ್, ಖಜಾಂಚಿ ದಾಮೋದರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಸದಸ್ಯರು ಹಾಗೂ ಛಾಯಾಗ್ರಾಹಕರ ಕುಟುಂಬಸ್ಥರು ಹಾಜರಿದ್ದರು.