ಜಿಲ್ಲೆ

ಸರ್ಕಾರ ಕೆಡವಲು ಬಿಜೆಪಿಯಿಂದ ಸರಣಿ ಪ್ರಯತ್ನ:ಎನ್. ಚಲುವರಾಯಸ್ವಾಮಿ ಆರೋಪ

ಹಾಸನ: ಬಿಜೆಪಿ ನಾಯಕರಾದ ವಿಜಯೇಂದ್ರ ಅವರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುತ್ತೇನೆ ಎಂದು ಹೇಳುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 136 ಸ್ಥಾನಗಳನ್ನು ಪಡೆದುಕೊಂಡು ಆಡಳಿತ ನಡೆಸುತ್ತಿರುವ ಸರ್ಕಾರವನ್ನು ಕೆಡವುತ್ತೇನೆ ಎಂದು ನೀಡುವ ಹೇಳಿಕೆ ಪ್ರಜಾಪ್ರಭುತ್ವಕ್ಕೆ ಮಾರಕ ಮತ್ತು ಗಂಭೀರ ಅಪರಾಧ ಹೇಳಿಕೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯವರು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿದ್ದರು. ಆದರೆ, ಜನರ ಆಶೀರ್ವಾದದಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ. ಇದನ್ನು ಸಹಿಸಲಾಗದೆ ಗಾಬರಿಗೆ ಬಿದ್ದ ಬಿಜೆಪಿಗರು ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಸುಳ್ಳು ಆರೋಪಗಳನ್ನು ಮಾಡುವುದರ ಜತೆಗೆ ಇನ್ನಿತರ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮೈಸೂರು ನಗರ ಪ್ರಾಧಿಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಅವರ ಸಹೋದರ ನೀಡಿದ್ದ ಜಮೀನನ್ನು ಸ್ವಾಧೀನಕ್ಕೆ ಪಡೆದ ಹಿನ್ನೆಲೆಯಲ್ಲಿ ಅವರಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಇದೀಗ ಮುಡಾ ನಿವೇಶಷ ಹಂಚಿಕೆ ಸಂಬಂಧ ತನಿಖೆ ನಡೆಯುತ್ತಿದೆ. ತನಿಖೆಯ ವರದಿ ಬಂದ ಮೇಲೆ ಬಿಜೆಪಿಗರು ಮಾತನಾಡಲಿ. ಅದಕ್ಕೂ ಮುನ್ನವೇ ಸಿಎಂ ರಾಜೀನಾಮೆ ನೀಡಲಿ ಎಂದು ಹೇಳುತ್ತಿರುವುದು ಅಕ್ಷಮ್ಯ. ಜತೆಗೆ ವಾಲ್ಮೀಕಿ ನಿಗಮದ ಹಣ ದುರುಪಯೋಗ ವಿಷಯದಲ್ಲೂ ಹೀಗೆ ನಡೆದುಕೊಳ್ಳುತ್ತಿದ್ದಾರೆ. ಈ ಪ್ರಕರಣ ಸಂಬಂಧ ಎಸ್‌ಐಟಿ ಸೇರಿದಂತೆ ಇದೀಗ ಇಡಿ ತನಿಖೆ ನಡೆಸುತ್ತಿದೆ. ತನಿಖೆಯ ವರದಿ ಬರುವವರೆಗೂ ತಾಳ್ಮೆಯಿಂದ ಬಿಜೆಪಿಗರು ಕಾಯಲಿ. ವರದಿ ಆಧರಿಸಿ ಸರಿ-ತಪ್ಪು ನಿರ್ಣಯ ಮಾಡಬಹುದು ಎಂದು ತಿರುಗೇಟು ನೀಡಿದರು.
ಮುಡಾ ಪ್ರಕರಣ ಸಂಬಂಧ ಶುಕ್ರವಾರ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು ಆರ್. ಅಶೋಕ್ ನನಗೆ ಒಳ್ಳೆಯ ಸ್ನೇಹಿಯ. ಆದರೆ, ಅವರು ವಿರೋಧ ಪಕ್ಷ ಸ್ಥಾನಕ್ಕೆ ಸಮರ್ಥರೇ? ಅವರನ್ನು ವಿರೋಧ ಪಕ್ಷದ ನಾಯಕರು ಎಂದು ಒಪ್ಪಿಕೊಳ್ಳಲು ಸಾಧ್ಯವೇ? ಎಂದು ಟಾಂಗ್ ನೀಡಿದರು.

ಎಚ್‌ಡಿಕೆ ಹಗಲು ಕನಸು!:
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಂದಿನ ದಿನಗಳಲ್ಲಿ ನಾನೇ ಮುಖ್ಯಮಂತ್ರಿಯಾಗುತ್ತೇನೆ. ರಾಮನಗರ ಜಿಲ್ಲೆಯನ್ನ ಉಳಿಸುತ್ತೇನೆ ಎಂದು ಹೇಳುವ ಮೂಲಕ ಹಗಲುಗನಸು ಕಾಣುತ್ತಿದ್ದಾರೆ. ಒಂದು ವೇಳೆ ಹಾಗಾದರೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಬಿಜೆಪಿ ನಾಯಕರ ಗತಿ ಏನು ಎಂದು ಚೆಲುವರಾಯಸ್ವಾಮಿ ಲೇವಡಿ ಮಾಡಿದರು.
ಕುಮಾರಸ್ವಾಮಿಯವರು 10, 20 ಸೀಟುಗಳನ್ನು ತೆಗೆದುಕೊಂಡು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಈಗಾಗಲೇ ಎರಡು ಲೋಕಸಭಾ ಸ್ಥಾನ ಗೆಲ್ಲುವ ಮೂಲಕ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಮತ್ತು ಬಸವರಾಜ್ ಬೊಮ್ಮಾಯಿ ಅವರನ್ನು ಹಿಂದಕ್ಕೆ ಹಾಕಿ ಕೇಂದ್ರದಲ್ಲಿ ದೊಡ್ಡ ಖಾತೆಯನ್ನು ಪಡೆಯುವ ಮೂಲಕ ಪ್ರಭಾವಿ ಸಚಿವರಾಗಿದ್ದಾರೆ. ಈಗ ರಾಮನಗರ ವಿಚಾರದಲ್ಲಿ ನಾನೇ ಮತ್ತೆ ಮುಖ್ಯಮಂತ್ರಿಯಾಗಿ ಬಂದು ರಾಮನಗರವನ್ನು ಉಳಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಬಿಜೆಪಿ ಮೈತ್ರಿಯಲ್ಲಿ ಎಚ್‌ಡಿಕೆ ಸಿಎಂ ಆಗಲು ಚುನಾವಣೆಗೆ ಇನ್ನೂ ನಾಲ್ಕು ವರ್ಷ ಬಾಕಿ ಇದೆ. ಆನಂತರ ಜನರ ಆಶೀರ್ವಾದ ಹೇಗೆ ಇರುತ್ತದೆ ನೋಡೋಣ ಎಂದು ಹೇಳಿದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಕೇಂದ್ರದ ಸಚಿವರಾಗಿದ್ದಾರೆ. ಅವರು ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ಅರಿವಿಲ್ಲವೇ ಮಂಡ್ಯದಲ್ಲಿ ಜನಸ್ಪಂದನ ಸಭೆ ಮಾಡಿದ್ದಾರೆ. ಪ್ರಧಾನ ಮಂತ್ರಿ ಅವರು ಬಂದು ವಿಧಾನಸಭೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಲು ಸಾಧ್ಯವೇ? ಕುಮಾರಸ್ವಾಮಿ ಅವರು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದಾರೆ. ಅದೆ ರೀತಿ ಮಂಡ್ಯದಲ್ಲೇ ಒಂದು ಮನೆ ಮಾಡಿ ಅಲ್ಲಿಯೇ ಉಳಿದುಕೊಳ್ಳಲಿ. ಪ್ರಧಾನಿಯವರಿಗೆ ಹೇಳಿ ಇಲ್ಲಿಂದಲೇ ಕೆಲಸ ಮಾಡಲಿ ನನ್ನದೇನು ಅಭ್ಯಂತರವಿಲ್ಲ ಎಂದರು.

ರಾಜ್ಯದೆಲ್ಲೆಡೆ ಉತ್ತಮ ಮುಂಗಾರು:
ಕಳೆದ ಬಾರಿ ಬರಗಾಲದಿಂದ ಜನರು ತೀವ್ರ ಸಂಕಷ್ಟ ಎದುರಿಸಿದ್ದರು. ಆದರೆ ಈ ಬಾರಿ ರಾಜ್ಯದ 31 ಜಿಲ್ಲೆಗಳಲ್ಲಿಯೂ ಕೂಡ ಉತ್ತಮ ಮಳೆಯಾಗುತ್ತಿದೆ. 82.48ಲಕ್ಷ ಹೆಕ್ಟರ್‌ನಲ್ಲಿ ಬಿತ್ತನೆ ಗುರಿ ಹೊಂದಿದ್ದು, ಈಗಾಗಲೇ 50.91 ಲಕ್ಷ ಹೆಕ್ಟರ್‌ನಲ್ಲಿ ಬಿತ್ತನೆ ಕಾರ್ಯ ಆಗಿದ್ದು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರಿಯನ್ನು ಸಾಧಿಸುತ್ತೇವೆ ಎಂದು ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.
ರೈತ ಸಮುದಾಯದ ಕಲ್ಯಾಣಕ್ಕಾಗಿ ಮತ್ತು ರೈತರ ಸಮಸ್ಯೆಗಳಿಗೆ ಸೂಕ್ತ ರೀತಿ ಸ್ಪಂದಿಸಲು ರೈತ ಕರೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕೃಷಿಭಾಗ್ಯ ಯೋಜನೆಯಲ್ಲಿ ರಾಜ್ಯ ಮಳೆಯಾಶ್ರಿತ ಕೃಷಿ ನೀತಿ 2014ರ ಅನ್ವಯ ರಾಜ್ಯದ ಹವಾಮಾನ ವಲಯ 24 ಜಿಲ್ಲೆಗಳ ನೂರಾರು ತಾಲೂಕುಗಳಲ್ಲಿ ಕೃಷಿ ಹೊಂಡ ಮತ್ತು ಇನ್ನಿತರ ಘಟಕಗಳ ಸ್ಥಾಪನೆಗೆ ಮಾದರಿ ಅನುಷ್ಠಾನ ಮಾಡಲಾಗಿದೆ ಇದಲ್ಲದೆ ಹೈಟೆಕ್ ಹಾರ್ವೆಸ್ಟರ್ ಹಬ್, ಕೃಷಿ ಯಾಂತ್ರಿಕರಣ ಯೋಜನೆ, ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆ, ಸೂಕ್ಷ್ಮ ನೀರಾವರಿ, ರೈತ ಸಿರಿ ಯೋಜನೆಗಳನ್ನು ಕೂಡ ಜಾರಿಗೆ ತರುವ ಮೂಲಕ ರೈತ ಸಮುದಾಯವನ್ನು ಆರ್ಥಿಕವಾಗಿ ಸದೃಢಗೊಳಿಸಲು ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಹೇಳಿದರು.

ಖಾಲಿ ಹುದ್ದೆಗಳ ನೇಮಕಾತಿ ಶೀಘ್ರ:
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಲಾಖೆಯಲ್ಲಿ ಹತ್ತರಿಂದ ಹದಿನೈದು ವರ್ಷಗಳ ಕಾಲ ನೇಮಕಾತಿ ಮಾಡಿಕೊಂಡಿರಲಿಲ್ಲ. ಈಗ ಸುಮಾರು 960 ಹುದ್ದೆಗಳಿಗೆ ನೇಮಕಾತಿಗೆ ಆರ್ಥಿಕ ಇಲಾಖೆಯಿಂದ ಮಂಜೂರಾತಿ ನೀಡಿದ್ದು ಕೆಪಿಎಸ್‌ಸಿ ಮೂಲಕ ನೇಮಕಾತಿಗೆ ಸೂಚನೆ ನೀಡಲಾಗಿದೆ. ಶೀಘ್ರದಲ್ಲೇ ಕೃಷಿ ಅಧಿಕಾರಿ ಹುದ್ದೆಯಿಂದ ಕೃಷಿ ಇಲಾಖೆಯ ಜಂಟಿ ಉಪನಿರ್ದೇಶಕರ ಹುದ್ದೆಯವರಿಗೂ ನೇಮಕಾತಿ ಮಾಡಿಕೊಳ್ಳಲಾಗುವುದೆಂದು ತಿಳಿಸಿದರು.

ಬರ ಪರಿಹಾರ ನೀಡದ ಕೇಂದ್ರ ಸರ್ಕಾರ:
ಕಳೆದ ವರ್ಷ ತೀವ್ರ ಬರಗಾಲದಿಂದ ಇಡೀ ರಾಜ್ಯವೇ ತತ್ತರಿಸಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಕೇಂದ್ರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದೇವು. ಖುದ್ದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಇಲಾಖೆ ಮತ್ತು ಕೃಷಿ ಸಚಿವರನ್ನು ಭೇಟಿಯಾಗಿ ಎನ್‌ಡಿಆರ್‌ಎಫ್ ಮೂಲಕ ಸಹಕಾರ ನೀಡುವಂತೆ ಕೇಳಲಾಗಿತ್ತು. ಆದರೆ ಕೇಂದ್ರ ಸರ್ಕಾರ ಯಾವುದೇ ಸಹಾಯ ಮಾಡಲಿಲ್ಲ. ಬಳಿಕ ನ್ಯಾಯಾಲಯದ ಮೂಲಕ ರಾಜ್ಯಕ್ಕೆ ಬರಬೇಕಾಗಿದ್ದ 3454 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿಕೊಂಡು ಅದನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಯಿತು ಎಂದು ಹೇಳಿದರು.