ಜಿಲ್ಲೆ

ಸರ್ಕಾರ ಅಭಿಪ್ರಾಯ ಕೆಡಿಸಲು ಬಿಜೆಪಿ ಪ್ರಯತ್ನ

ವಿಜಯವಾಣಿ ಸುದ್ದಿಜಾಲ ಧಾರವಾಡ
ಐದು ವರ್ಷ ಆಡಳಿತ ನಡೆಸಲು ಜನರು ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಸರ್ಕಾರ ಸಂಪೂರ್ಣ 5 ವರ್ಷ ಉತ್ತಮ ಆಡಳಿತ ನೀಡಲಿದೆ. ಬಿಜೆಪಿಯವರು 65 ಸೀಟ್ ಮಾತ್ರ ಪಡೆದು ಹತಾಶರಾಗಿದ್ದಾರೆ. ಇನ್ನು ಕೆಲ ತಿಂಗಳಲ್ಲಿ ಲೋಕಸಭೆ ಚುನಾವಣೆ ಬರುತ್ತಿರುವುದರಿಂದ ಇಂತಹ ಗಿಮಿಕ್ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಸಚಿವ ಸಂತೋಷ ಲಾಡ್ ತಿರುಗೇಟು ನೀಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಗಳ ಮೂಲಕ ಕೇಂದ್ರ ಸರ್ಕಾರ ಮಾತನಾಡಲು ಮುಂದಾಗುತ್ತಿಲ್ಲ. ಬಿಜೆಪಿ ವಿವಾದಗಳನ್ನು ಹುಟ್ಟು ಹಾಕುವ ಮೂಲಕ ನಮ್ಮ ಸರ್ಕಾರದ ಅಭಿಪ್ರಾಯ ಕೆಡಿಸುವ ಪ್ರಯತ್ನ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಐಎಎಸ್ ಅಧಿಕಾರಿಗಳ ಬೆಂಗಳೂರು ವರ್ಗಕ್ಕೆ ಲಂಚ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರು ಆರೋಪ ಮಾಡಿದ್ದಾರೆ, ಯಾರು ಕೊಟ್ಟಿದ್ದಾರೆ ಅವರನ್ನೇ ಕೇಳಬೇಕು. ಕಳೆದ ಒಂದು ತಿಂಗಳಿನಿಂದ ವರ್ಗಾವಣೆಯಲ್ಲಿ ದುಡ್ಡು. ದುಡ್ಡು ಎನ್ನುತ್ತಿದ್ದಾರೆ. ಇದು ಬರೀ ಬಿಜೆಪಿಯವರ ಆರೋಪವಾಗಿದೆ. ಈ ಬಗ್ಗೆ ಅವರನ್ನೇ ಕೇಳಬೇಕು. ಈ ರೀತಿ ಮಾತನಾಡುವುದರಿಂದ ಸಾರ್ವಜನಿಕರಿಗೆ ಏನು ಉಪಯೋಗ. ಜನರಿಗೆ ಉಪಯೋಗ ಆಗುವಂತಹ ಕಾರ್ಯ ಮಾಡಬೇಕು. ಸರ್ಕಾರದ ಐದು ಗ್ಯಾರಂಟಿ ಯಶಸ್ವಿಯಾಗಿದೆ. ಬಡವರಿಗೆ ಯೋಜನೆ ತಲುಪುತ್ತಿದೆ. ಇದರಿಂದಾಗಿ ಅವರಿಗೆ ನೋವಾಗಿ ಸರ್ಕಾರದ ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಮುನಿರತ್ನ ಪುನಃ ಕಾಂಗ್ರೆಸ್ ಸೇರ್ಪಡೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲಾಡ, ನಮ್ಮದು ಡಬಲ್ ಡೆಕ್ಕರ್ ಬಸ್ ಇದ್ದಂತೆ. ಎಲ್ಲಿ ಬೇಕಾದರೂ ಹತ್ತಬಹುದು. ಎಲ್ಲಿ ಬೇಕಾದಲ್ಲಿ ಇಳಿಯಬಹುದು. ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಇದೆ. ಆದರೆ ಮುನಿರತ್ನ ಸೇರ್ಪಡೆ ಬಗ್ಗೆ ಮಾಹಿತಿ ಇಲ್ಲ. ನಾವು ಯಾರನ್ನೂ ಸೆಳೆಯುತ್ತಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ಸ್ವಾಗತಿಸುತ್ತೇವೆ. ಬಿಜೆಪಿಯ ಮುನೇನಕೊಪ್ಪ ಕಾಂಗ್ರೆಸ್ ಸೇರುವುದು, ಎಂಪಿ ಅಭ್ಯರ್ಥಿ ಆಗುವ ಬಗ್ಗೆ ಸ್ವಲ್ಪವೂ ಮಾಹಿತಿ ಇಲ್ಲ. ಅವರು ಬಂದರೆ ಸೇರಿಸಿಕೊಳ್ಳಲು ಸ್ವಾಗತ ಇದೆ. ಯಾರಿಗೆ ಎಂಪಿ ಟಿಕೆಟ್ ಎನ್ನುವುದು ಹೈಕಮಾಂಡ್ ಫೈನಲ್ ಮಾಡುತ್ತದೆ. ಮಾಜಿ ಶಾಸಕ ಚಿಕ್ಕನಗೌಡರ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾಹಿತಿ ನನಗೂ ಬಂದಿದೆ. ಆದರೆ ಅವರು ಯಾವ ಷರತ್ತು ವಿಧಿಸಿದ್ದಾರೆ ಎಂಬ ಮಾಹಿತಿ ಇಲ್ಲ ಎಂದರು.