ಚನ್ನರಾಯಪಟ್ಟಣ: ಹಿಂದುಳಿದ ವರ್ಗಗಳ ಇಲಾಖೆಗೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 108ನೇ ಜನ್ಮದಿನಾಚರಣೆ ನಿಮಿತ್ತ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೂ ತೃಪ್ತಿದಾಯಕ ಅನುದಾನ ಲಭ್ಯವಾಗುತ್ತಿಲ್ಲವಾದ್ದರಿಂದ ಫಲಾನುಭವಿಗಳ ಆಯ್ಕೆ ಕಷ್ಟವಾಗುತ್ತಿದೆ. ನಿಗಮಗಳು ಹೆಚ್ಚಾಗುತ್ತಿದ್ದು, ಅದಕ್ಕನುಸಾರವಾಗಿ ಅನುದಾನವನ್ನು ಹೆಚ್ಚಳ ಮಾಡಬೇಕು. ಪಟ್ಟಣದ ದೇವರಾಜ ಅರಸು ಭವನ ನಿರ್ಮಿಸಲು ನಿವೇಶನ ಕಾಯ್ದಿರಿಸಲಾಗಿದೆ. ಅನುದಾನದ ಲಭ್ಯತೆ ಆಧರಿಸಿ ಮುಂದಿನ ಆರ್ಥಿಕ ವರ್ಷದಲ್ಲಿ ಭವನ ನಿರ್ಮಿಸಲಾಗುವುದು ಎಂದು ಹೇಳಿದರು.
ಭೂ ಸುಧಾರಣೆ ಕಾಯ್ದೆ ಜಾರಿ ಮಾಡುವ ಮೂಲಕ ಉಳುವವನು ಭೂಮಿಯ ಒಡೆಯ ಎಂದು ಘೋಷಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಈ ಕಾಯ್ದೆ ಪ್ರಕಾರ ಭೂರಹಿತರಿಗೆ ಭೂಮಿ ಹಂಚಲಾಯಿತು. ಹಿಂದುಳಿದ ವರ್ಗದವರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಪುನಶ್ಚೇತನಕ್ಕೆ ಕಾರಣರಾದರು. ಅರಸು ಅವರ ಸಾಧನೆ, ಬದುಕು ನಮಗೆ ಆದರ್ಶವಾಗಬೇಕು. ಎಲ್ಲರೂ ಸಮಾಜಮುಖಿ ಚಿಂತನೆಯ ಮೂಲಕ ಉತ್ತಮ ಸಮಾಜ ನಿರ್ಮಿಸುವಂತಾಗಬೇಕು ಎಂದು ತಿಳಿಸಿದರು.
ಕಲಾವಿದ ಲೋಕೇಶ್ ದಾಸ್ ಮಾತನಾಡಿ, ಜನಸೇವೆ ಮಾಡುವ ಕಳಕಳಿ ಮತ್ತು ಸಾಮಾಜಿಕ ಬದ್ಧತೆ ದೇವರಾಜ ಅರಸು ಅವರಿಗೆ ಇತ್ತು. ಇವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಸತಿ ನಿಲಯವನ್ನು ಆರಂಭಿಸಿದರು ಎಂದು ತಿಳಿಸಿದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು ಹಾಗೂ ಪ್ರತಿಜ್ಞಾವಿಧಿ ಬೋಧಿಸಲಾಯಿತು. ತಹಸೀಲ್ದಾರ್ ಸಿ.ಜಿ.ಗೀತಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಅನಂತು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಹರೀಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಎಸ್.ಇಂದ್ರಾ, ಮುಖಂಡರಾದ ಜನಾರ್ದನ್, ಬಿ.ಪಿ.ಕುಮಾರ್, ಪುಟ್ಟಣ್ಣ, ಶಾಂತರಾಜ್, ಡಿಶ್‌ಕುಮಾರ್, ವೆಂಕಟೇಶಾಚಾರ್, ಶಂಕರಲಿಂಗೇಗೌಡ, ಕೃಷ್ಣಶೆಟ್ಟಿ ಇತರರು ಉಪಸ್ಥಿತರಿದ್ದರು.