ಜಿಲ್ಲೆ

ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ಆಗ್ರಹ:ಪ್ರತಿಭಟನೆ

Hassan - Ramesh H R

ಹಾಸನ: ಕರ್ನಾಟಕದ ನೆಲದ ಮಕ್ಕಳ ಬದುಕು ಹಸನು ಮಾಡುವ ನಿಟ್ಟಿನಲ್ಲಿ ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಶೀಘ್ರ ಜಾರಿಗೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರಿಗೆ ಮನವಿ ಸಲ್ಲಿಸಲಾಯಿತು.
ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ವೈ.ಡಿ. ಭಾನುಪ್ರಕಾಶ್ ಮಾತನಾಡಿ, ಕರ್ನಾಟಕದ ನೆಲದ ಮಕ್ಕಳ ಬದುಕು ಹಸನು ಮಾಡಲು 1984 ಜನವರಿ 25ರಂದು ಡಾ. ಸರೋಜಿನಿ ಮಹಿಷಿ ನೇತೃತ್ವದಲ್ಲಿ ಸಮಿತಿ ರಚನೆಯಾಗಿ 1986ರಲ್ಲಿ ಈ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಯು ರಾಜ್ಯದಲ್ಲಿ ಕನ್ನಡಿಗರ ಉದ್ಯೋಗ ಸಮಸ್ಯೆಗೆ ಪರಿಹಾರ ಕಲ್ಪಿಸುವ ಮಾರ್ಗಗಳನ್ನು ಹೊಂದಿತ್ತು. ನಮ್ಮ ಪಕ್ಕದ ರಾಜ್ಯಗಳಾದ ತಮಿಳುನಾಡಿನಲ್ಲಿ ಸ್ಥಳೀಯ ಭಾಷಿಗರಿಗೆ ಶೇಕಡ 90ರಷ್ಟು, ಆಂಧ್ರದಲ್ಲಿ ಶೇ.80 ರಷ್ಟು ಮೀಸಲಾತಿ ನೀಡಿವೆ ಎಂದರು.
ಸಮಿತಿಯು ವರದಿ ನೀಡಿದಾಗ ಸರ್ಕಾರಿ ವಲಯದಲ್ಲಿಯೇ ಹೆಚ್ಚು ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು. ಆದರೆ, ಈಗ ಜಾಗತೀಕರಣದ ಪರಿಣಾಮವಾಗಿ ಸರ್ಕಾರಿ ವಲಯದ ಉದ್ದಿಮೆಗಳು ಹಿನ್ನೆಲೆಗೆ ಸರಿಯುತ್ತಿವೆ. ಐಟಿ-ಬಿಟಿ, ಬಹುರಾಷ್ಟ್ರೀಯ ಕಂಪನಿಗಳು, ಬ್ಯಾಂಕುಗಳು ಮೊದಲಾದ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ. ಡಾ. ಸರೋಜಿನಿ ಮಹಿಷಿ ವರದಿ ಸಿದ್ಧಪಡಿಸಿದಾಗ ಈ ಉದ್ಯಮಗಳು ಇರಲಿಲ್ಲ. ಹಾಗಾಗಿ, ಇವುಗಳ ಪ್ರಸ್ತಾಪ ವರದಿಯಲ್ಲಿ ಇಲ್ಲ. ಅಲ್ಲದೇ, ರಾಜ್ಯದಲ್ಲಿ ಆಗ ಹೆಚ್ಚು ಕೇಂದ್ರ ಕಚೇರಿಗಳು ಇರಲಿಲ್ಲ. ಸಹಜವಾಗಿ ವರದಿಯಲ್ಲಿ ಇವು ಕಾಣಿಸಿಕೊಂಡಿಲ್ಲ. ಈ ಮೂರು ದಶಕಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದನ್ನು ಮನಗಂಡು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಡಾ॥ ಸರೋಜಿನಿ ಮಹಿಷಿ ವರದಿಯನ್ನು ಪುನರ್ ಪರಿಶೀಲಿಸಲು 2016 ರಲ್ಲಿ ಪ್ರೊ. ಎಸ್.ಟಿ. ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಸಮಿತಿಯನು ್ನರಚಿಸಲಾಯಿತು ಎಂದು ತಿಳಿಸಿದರು.
ಪರಿಷ್ಕರಿಸಿದ ವರದಿಯಲ್ಲಿ ಕಾಯ್ದೆ ಮಾಡಲು ಅಗತ್ಯವಿರುವ 14 ಅಂಶಗಳನ್ನು ಪಟ್ಟಿ ಮಾಡಿ, ಸರ್ಕಾರಕ್ಕೆ ಸಲ್ಲಿಸಿ ಅನುಷ್ಠಾನಕ್ಕೆ ಮನವಿ ಮಾಡಲಾಗಿದೆ. ಕನ್ನಡಿಗರ ಮೇಲೆ ಅಪಾರ ಗೌರವ ಮತ್ತು ಕಾಳಜಿ ಇದ್ದರೆ ಶೀಘ್ರದಲ್ಲಿ ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಅನುಷ್ಠಾನಕ್ಕೆ ತರಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡುವುದಾಗಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ನೀಡಿದರು.
ಪ್ರತಿಭಟನೆಯಲ್ಲಿ ನಮ್ಮ ಕರ್ನಾಟಕ ಸೇನೆಯ ಮಹಿಳಾ ಜಿಲ್ಲಾಧ್ಯಕ್ಷೆ ತನುಪ್ರಿಯಾ ಆಚಾರ್, ಉಪಾಧ್ಯಕ್ಷ ರವೀಂದ್ರ ಕುಮಾರ್, ಎಚ್.ಎನ್. ಬಸವರಾಜ್, ಎಚ್.ಆರ್. ರೂಪಾ, ಎಂ.ಜಿ. ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಆಲೂರು ತಾಲೂಕು ಅಧ್ಯಕ್ಷ ಆರಿಫ್, ಯುವ ಘಟಕ ಅಧ್ಯಕ್ಷ ಆಸೀಫ್, ಅರಸೀಕೆರೆ ತಾಲೂಕು ಅಧ್ಯಕ್ಷ ಚೇತನ್, ಅರುಣಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲ ಸದಸ್ಯರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.