ಕಾರವಾರ: ಕರೊನಾ ಭಯ, ಸರ್ಕಾರದ ನಿಬಂಧನೆಗಳ ನಡುವೆ ಸರಳ ಗಣೇಶ ಚತುರ್ಥಿ ಆಚರಣೆಗೆ ಜಿಲ್ಲೆಯಲ್ಲಿ ತಯಾರಿ ನಡೆದಿದೆ.
ಎರಡು ದಿನಕ್ಕೆ ಸೀಮಿತವಾಗಿ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಆಯಾ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಹಾಗೂ ಪೊಲೀಸ್ ಠಾಣೆಗಳಿಂದ ಅನುಮತಿ ಪಡೆಯಲು ಸೂಚಿಸಲಾಗಿದೆ. ಎಲ್ಲ ತಾಲೂಕುಗಳಲ್ಲೂ ಈಗಾಗಲೇ ತಹಸೀಲ್ದಾರ್ಗಳು ಸಭೆ ನಡೆಸಿದ್ದು, ಯಾವುದೇ ಕಾರಣಕ್ಕೂ ಮೆರವಣಿಗೆ ನಡೆಸಲು ಅವಕಾಶವಿಲ್ಲ. ಸಮೀಪದ ಸ್ಥಳದಲ್ಲಿ ಕಡ್ಡಾಯವಾಗಿ ವಾಹನದಲ್ಲಿ ಕೊಂಡೊಯ್ದು ಮುಳುಗಿಸಬೇಕು ಎಂದು ಸೂಚಿಸಲಾಗಿದೆ.
ಕಾರವಾರದಲ್ಲಿ 16 ಗಣೇಶೋತ್ಸವ ಸಮಿತಿಗಳಿದ್ದು, ತಹಸೀಲ್ದಾರ್ ರಾಮಚಂದ್ರ ಕಟ್ಟಿ ಬುಧವಾರ ಸಮಿತಿಗಳ ಸಭೆ ನಡೆಸಿ ಸೂಚನೆಗಳನ್ನು ನೀಡಿದ್ದಾರೆ. ಸರ್ಕಾರದ ಸೂಚನೆಯಂತೆ ಸರಳವಾಗಿ ಎರಡು ದಿನ ಮಾತ್ರ ಸಣ್ಣ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲು ನಾವು ಸಿದ್ಧತೆ ನಡೆಸಲಿದ್ದೇವೆ ಎಂದು ಸಮಿತಿಯೊಂದರ ಅಧ್ಯಕ್ಷ ದಿಲೀಪ ಅರ್ಗೆಕರ್ ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಜನಜಂಗುಳಿ: ಕಾರವಾರ ಮಾರುಕಟ್ಟೆಯಲ್ಲಿ ಗುರುವಾರ ಜನಜಂಗುಳಿ ಕಂಡುಬಂತು. ಮತ್ತಿ ಕಾಯಿ, ಸವತೆ ಕಾಯಿ, ಗೌರಿ ಹೂವು, ಬಾಳೆ ಕಾಯಿ, ಮುಂತಾದ ಫಲವಳಿಗೆ ಸಾಮಗ್ರಿಗಳು ಅರಿಶಿನ ಎಲೆ ಮುಂತಾದ ಅಡುಗೆ ಸಾಮಗ್ರಿಗಳನ್ನು ಸಾಕಷ್ಟು ಜನರು ಮಾರಾಟಕ್ಕೆ ಇಟ್ಟಿದ್ದು, ಕಂಡು ಬಂತು, ಮಾರುಕಟ್ಟೆಯಲ್ಲಿ ಖರೀದಿಸುವವರ ಸಂಖ್ಯೆಯೂ ಅಷ್ಟಿಷ್ಟಿತ್ತು.
ಗೋವಾಕ್ಕಿಲ್ಲ ಗಣಪ: ಕಾರವಾರ ಹಾಗೂ ಸದಾಶಿವಗಡದಿಂದ ಭಾದ್ರಪದ ಶುಕ್ಲ ಚೌತಿಯ ಸಂದರ್ಭದಲ್ಲಿ ಪ್ರತಿ ವರ್ಷ ನೂರಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ಪಕ್ಕದ ಗೋವಾ ರಾಜ್ಯಕ್ಕೆ ಕೊಂಡೊಯ್ಯುಲಾಗುತ್ತಿತ್ತು. ಸ್ಥಳೀಯ ಕಲಾವಿದರು ಮೂರ್ತಿಗಳನ್ನು ಪಾರಂಪರಿಕವಾಗಿ ನಿರ್ವಿುಸುತ್ತಿದ್ದರು. ಆದರೆ, ಈ ಬಾರಿ ಕರೊನಾ ಕಾರಣಕ್ಕೆ ಗೋವಾ ಹಾಗೂ ಕಾರವಾರ ನಡುವೆ ಮುಕ್ತ ಸಂಚಾರ ವ್ಯವಸ್ಥೆ ಇಲ್ಲ ಇದರಿಂದ ಗೋವಾದಿಂದ ಗಣಪತಿ ಮೂರ್ತಿಗಳಿಗೆ ಬೇಡಿಕೆ ಬಂದಿಲ್ಲ ಎನ್ನುತ್ತಾರೆ ಪಾರಂಪರಿಕ ಗಣೇಶ ಮೂರ್ತಿ ತಯಾರಕ ರಾಜೇಶ ಸೈಲ್. ತಮ್ಮ ತಂದೆಯಿಂದ ಬಂದ ಈ ಕಾರ್ಯವನ್ನು ರಾಜೇಶ, ಗಣೇಶ ಹಾಗೂ ನೀಲೇಶ ಸೈಲ್ ಎಂಬ ಸಹೋದರರು ಶ್ರದ್ಧೆಯಿಂದ ಮುಂದುವರೆಸಿಕೊಂಡು ಬಂದಿದ್ದಾರೆ. ವರ್ಷವೂ ನೂರಕ್ಕೂ ಅಧಿಕ ಗಣೇಶ ವಿಗ್ರಹಗಳನ್ನು ನಿರ್ಮಾಣ ಮಾಡುತ್ತಾರೆ.
ಪ್ರತಿ ಸಮಿತಿಗೆ ಒಬ್ಬ ನೋಡಲ್ ಅಧಿಕಾರಿ; ಪ್ರತಿ ಸಾರ್ವಜನಿಕ ಗಣೇಶೋತ್ಸವಕ್ಕೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಜಿಲ್ಲೆಯ ತಹಸೀಲ್ದಾರ್ಗಳಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸೂಚಿಸಿದ್ದಾರೆ. ಅನುಮತಿ ನೀಡಲು ಪೊಲೀಸ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ಏಕ ಗವಾಕ್ಷಿ ವ್ಯವಸ್ಥೆ ಜಾರಿ ಮಾಡಿ. ಸಮಿತಿಯ ಒಬ್ಬ ವ್ಯಕ್ತಿಯಿಂದ ಸರ್ಕಾರದ ನಿಯಮಾವಳಿ ಪಾಲಿಸುವ ಬಗ್ಗೆ ಮುಚ್ಚಳಿಕೆ ಬರೆಸಿಕೊಳ್ಳಬೇಕು. ನಿಯಮ ಉಲ್ಲಂಘಿಸಿದರೆ ಅವರನ್ನೇ ಜವಾಬ್ದಾರರನ್ನಾಗಿ ಮಾಡಬೇಕು ಎಂದು ಸೂಚಿಸಿದ್ದಾರೆ.
ವಾಪಸ್ ಟಿಕೆಟ್ ಇದ್ದರೆ ಮಾತ್ರ ಅವಕಾಶ; ಎರಡು ದಿನಗಳ ಒಳಗೆ ಮರಳುವ ಟಿಕೆಟ್ ಇದ್ದರೆ ಅಥವಾ ಭರವಸೆ ಪತ್ರ ಬರೆದುಕೊಟ್ಟರೆ ಹೊರ ರಾಜ್ಯದಲ್ಲಿ ಉದ್ಯೋಗದಲ್ಲಿರುವವರು ಕ್ವಾರಂಟೈನ್ ಇಲ್ಲದೇ ಗಣೇಶ ಚತುರ್ಥಿಗೆ ಊರಿಗೆ ಬಂದು ಹೋಗಬಹುದು ಎಂದು ತಹಸೀಲ್ದಾರ್ ರಾಮಚಂದ್ರ ಕಟ್ಟಿ ತಿಳಿಸಿದ್ದಾರೆ. ಸೇವಾ ಸಿಂಧು ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮನೆ ಬಿಟ್ಟು ಹೊರಗೆ ಹೊಗಬಾರದು ಎಂದು ಷರತ್ತು ವಿಧಿಸಲಾಗುತ್ತದೆ ಎಂದಿದ್ದಾರೆ. ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಜಿಲ್ಲೆಯ ಸಾಕಷ್ಟು ಜನರಿದ್ದು, ಅವರು ಗಣೇಶ ಹಬ್ಬಕ್ಕೆ ಜಿಲ್ಲೆಗೆ ಬರಲು ಉತ್ಸುಕರಾಗಿದ್ದಾರೆ. ಆದರೆ, ಕರ್ನಾಟಕದಲ್ಲಿ ಕ್ವಾರಂಟೈನ್ ತಪ್ಪಿಸಿಕೊಂಡರೂ ಹಾಲಿ ಇರುವ ರಾಜ್ಯಗಳಿಗೆ ಮರಳಿದಾಗ ಮತ್ತೆ ಕ್ವಾರಂಟೈನ್ ಆಗುವ ಆತಂಕ ಹಲವರಲ್ಲಿದೆ.