ಹುಬ್ಬಳ್ಳಿ/ಧಾರವಾಡ: ಕರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಹುಬ್ಬಳ್ಳಿ, ಧಾರವಾಡದಲ್ಲಿ ಮುಸ್ಲಿಮರು ಶನಿವಾರ ಸರಳವಾಗಿ ಬಕ್ರೀದ್ ಆಚರಿಸಿದರು.
ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿರಲಿಲ್ಲ. ಮನೆ, ಮಸೀದಿಗಳಿಗೆ ಬಕ್ರೀದ್ ಆಚರಣೆ ಸೀಮಿತವಾಗಿತ್ತು. ಪ್ರತಿ ವರ್ಷ ಹುಬ್ಬಳ್ಳಿ ಚನ್ನಮ್ಮ ವೃತ್ತ, ಹಳೇ ಹುಬ್ಬಳ್ಳಿ, ಇನ್ನಿತರ ಕಡೆ ಈದ್ಗಾ ಮೈದಾನಗಳಲ್ಲಿ ಸಾವಿರಾರು ಜನ ಮುಸ್ಲಿಂರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ಬಾರಿ ಈದ್ಗಾ ಮೈದಾನಗಳಿಗೆ ಪೊಲೀಸ್ ನಿಗಾ ಇತ್ತು. ಮಸೀದಿಗಳ ಸುತ್ತಲೂ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಮಸೀದಿಯಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿದರು. ದೂರದಿಂದಲೇ ಪರಸ್ಪರ ಶುಭ ಕೋರಿದರು. ಮಸೀದಿಯಲ್ಲಿ ಏಕಕಾಲಕ್ಕೆ ಹೆಚ್ಚಿನ ಜನರು ಸೇರಲು ಅವಕಾಶವಿಲ್ಲದ್ದರಿಂದ ಕೆಲವೆಡೆ ಸರದಿಯಲ್ಲಿ 2-3 ಬಾರಿ ಪ್ರಾರ್ಥನೆ ಸಲ್ಲಿಸಲಾಗಿದೆ. ಅಲ್ತಾಫ್ನಗರ ಮದೀನಾ ಮಸೀದಿಯಲ್ಲಿ ಮೊದಲು ಮೌಲಾನಾ ಮುಫ್ತಿ ಮಹಮ್ಮದ ಖ್ವಾಜಾ, ನಂತರ ಮೌಲಾನಾ ಅಬ್ದುಲ್ ಹಕೀಂ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಕರೊನಾದಿಂದ ದೇಶ ಎದುರಿಸುತ್ತಿರುವ ಸಂಕಷ್ಟಗಳು ದೂರವಾಗಿ ಜನರು ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂದು ಪ್ರಾರ್ಥಿಸಿದರು. ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ ಶುಭ ಹಾರೈಸಿದರು.
ಅಲ್ಲಾಬಕ್ಷ ಸವಣೂರು, ನಜೀರ್ ಸಾಬ ಮಿರಜ, ಮುನ್ನಾ ಕಿಲ್ಲೇದಾರ, ಎ.ಎಂ. ಮಸೂತಿ, ದಾವಲಸಾಬ ಮುಲ್ಲಾ, ನನ್ನೇಸಾಬ ನಲ್ಲಿ ಕೊಪ್ಪ, ಆಸೀಫ್ ಪಾಲನ್, ರಸೂಲ ಉಲ್ಮಾ, ಇಸ್ಮಾಯಿಲ್ ಸಾಬ, ಇತರರಿದ್ದರು.
ಮೂರು ಸಾವಿರ ಮಠಕ್ಕೆ ಭೇಟಿ: ಬಕ್ರೀದ್ ನಿಮಿತ್ತ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಸ್ಲಿಂರು ಮೂರು ಸಾವಿರ ಮಠಕ್ಕೆ ಭೇಟಿ ನೀಡಿ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದರು. ರಾಜಾಸಾಬ ಸಿಕಂದರ, ಎಸ್ಜೆಎಂವಿ ಸಂಘದ ನಿರ್ದೇಶಕ ಸದಾನಂದ ಡಂಗನವರ, ಸುನಿಲ ಕುರ್ಡೆಕರ, ಅಶೋಕ್ ಕುದುರಿ, ಇನ್ನಿತರರಿದ್ದರು.