ಸುರೇಶ ಕಾಗಲೆ ಐನಾಪುರ: ಮಾತು ಒರಟಾದರೂ ಮೃದು ಸ್ವಭಾವ, ಸರಳ ಸಜ್ಜನಿಕೆ ವ್ಯಕ್ತಿತ್ವದ ಮೂಲಕ ಕಾಗವಾಡ ಮತಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿ, ನೀರಾವರಿ, ಶಿಕ್ಷಣ, ಸಾರಿಗೆ ಇಲಾಖೆ ಸೇರಿದಂತೆ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟು ಹಗಳಿರುಳು ಶ್ರಮಿಸುತ್ತಿದ್ದಾರೆ ಶಾಸಕ ಭರಮಗೌಡ( ರಾಜು) ಕಾಗೆ.
ಟೀಕಾಕಾರರಿಗೆ ಅಭಿ ವೃದ್ಧಿ ಕಾಮಗಾರಿಗಳ ಮೂಲಕ ಉತ್ತರ ನೀಡುವ ಜನನಾಯಕನಾಗಿ ಬೆಳೆದಿರುವ ಶಾಸಕ ಭರಮಗೌಡ(ರಾಜು ) ಕಾಗೆ ಯಾವತ್ತ್ತೂ ಅಧಿಕಾರಕ್ಕಾಗಿ ಹಂಬಲಿಸಿದವರಲ್ಲ. ಕ್ಷೇತ್ರದ ಜನರ ಬೆಂಬಲದಿಂದ ಐದನೇ ಬಾರಿ, ಪ್ರಸ್ತುತ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಒಲಿದು ಬಂದ ಅಧ್ಯಕ್ಷ ಸ್ಥಾನ: ಕಾಗವಾಡ ಕ್ಷೇತ್ರದಲ್ಲಿ ಮನೆ ಮನೆಗೂ ಚಿರ ಪರಿಚಿತನಾಗಿರುವ ಶಾಸಕ ರಾಜು ಕಾಗೆ ಅವರ ಕಾರ್ಯ ವೈಖರಿ ಗುರುತಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಿಸಿದೆ. ರಾಜು ಕಾಗೆ ಅವರ ವಾ.ಕ.ರ.ಸಾ.ಸಂಸ್ಥೆ ಅಧ್ಯಕ್ಷರಾದ ನಂತರ ಉತ್ತರ ಕರ್ನಾಟಕದ ಸಾರಿಗೆ ಸಮಸ್ಯೆಗಳ ನಿವಾರಿಸಲು ಶ್ರಮಿಸುತ್ತಿದ್ದಾರೆ. ಜತೆಗೆ ಸಾರಿಗೆ ಬಸ್ ವಂಚಿತ ಗ್ರಾಮಗಳಿಗೆ ಬಸ್ ಸೇವೆ ಒದಗಿಸಲು ಕ್ರಮವಹಿಸಿದ್ದಾರೆ.
ಬಸವೇಶ್ವರ ಏತ ನೀರಾವರಿ ರೂವಾರಿ: ಕಾಗವಾಡ ಮತಕ್ಷೇತ್ರದ ಜನರ ಬಹು ನಿರೀಕ್ಷಿತ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ 1363 ಕೋಟಿ ರೂ.ವೆಚ್ಚದ ಯೋಜನೆ ಮೊದಲ ಹಂತದ ನೀರು ಒದಗಿಸುವ ಪ್ರಾಯೋಗಿಕ ಕಾರ್ಯಕ್ಕೆ ಶಾಸಕ ರಾಜು ಕಾಗೆ ಚಾಲನೆ ನೀಡಿದ್ದಾರೆ. ಕಾಗೆ ಅವರ ಸತತ ಪ್ರಯತ್ನದ ಫಲವಾಗಿ ಇದು ಸಾಕಾರಗೊಂಡಿರುವುದು ರೈತಾಪಿ ವರ್ಗಕ್ಕೆ ಸಂತಸವುಂಟು ಮಾಡಿದೆ.
ಬಸವೇಶ್ವರ ಏತ ನೀರಾವರಿಗೆ ಸಂಕಲ್ಪ: ಸುಮಾರು 27,462 ಹೆಕ್ಟೇರ್ ಪ್ರದೇಶಕ್ಕೆ ಈ ಯೋಜನೆ ಸಹಕಾರಿಯಾಗಲಿದೆ.\
ಯೋಜನೆಯಿಂದ ಸುಮಾರು ಹತ್ತಾರು ಹಳ್ಳಿಗಳ ವ್ಯಾಪ್ತಿಯಲ್ಲಿ ಅಂತರ್ಜಲದ ಅಭಿವೃದ್ಧಿಯಾಗಿ ನೀರಿನ ಗುಣಮಟ್ಟ ಹೆಚ್ಚಾಗಲಿದೆ. ಈಗಾಗಲೇ ತಾಲೂಕಿನ ಅನಂತಪುರ, ಮದಬಾವಿ, ಶಿರೂರ, ಅಜೂರ ಸೇರಿ 22 ಹಳ್ಳಿಗಳಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಶಾಸಕ ರಾಜು ಕಾಗೆ ವಿಶೇಷವಾಗಿ ಪ್ರಯತ್ನಿಸುತ್ತಿದ್ದಾರೆ.
ಮೂಲಸೌಕರ್ಯಕ್ಕೆ ಒತ್ತು: ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟಿರುವ ರಾಜು ಕಾಗೆ ಕ್ಷೇತ್ರದಲ್ಲಿ ಮೂಲಸೌಕರ್ಯ ಒದಗಿಸಲು ವಿಶೇಷ ಒತ್ತು ನೀಡಿದ್ದಾರೆ. ಇವರು ಶಿಕ್ಷಣ ಕ್ಷೇತ್ರದ ಅಂಗನವಾಡಿ ಕಟ್ಟಡಗಳ ನಿರ್ಮಾಣ, ಶಾಲೆಗಳ ಅಭಿವೃದ್ಧಿ, ರಸ್ತೆ ಅಭಿವೃದ್ಧಿ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳ ಸಮರ್ಪಕ ಅನುಷ್ಠಾನಗೊಳಿಸುವ ಮೂಲಕ ಬರದ ನಾಡಿನ ಭಗೀರಥರಾಗಿದ್ದಾರೆ.