ಹೂವಿನಹಡಗಲಿ: ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವವರು ಬಡವರಲ್ಲ ಭಾಗ್ಯವಂತರು ಎಂದು ಉತ್ತಂಗಿ ಶಿವಶಂಕರಸ್ವಾಮಿ ಮಠದ ಸೋಮಶಂಕರ ಸ್ವಾಮೀಜಿ ಹೇಳಿದರು.
ಪಟ್ಟಣದ ಗವಿಮಠದಲ್ಲಿ ಗವಿಸಿದ್ಧೇಶ್ವರರ 30ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸೋಮವಾರ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮದುವೆಗಳಿಗೆ ಜನರು ದುಂದು ವೆಚ್ಚ ಮಾಡುತ್ತಿದ್ದಾರೆ. ಆದರೆ, ಸರಳ ವಿವಾಹವಾಗುವ ಮೂಲಕ ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳಬಹುದು. ಸಾಮೂಹಿಕ ವಿವಾಹ ಕುರಿತ ಜನರ ದೃಷ್ಟಿಕೋನ ಬದಲಾಗಬೇಕು. ಪ್ರಸ್ತುತ ದಿನಗಳಲ್ಲಿ ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿವೆ. ದುಂದುವೆಚ್ಚ ಮಾಡುವ ವಿವಾಹಗಳು ಕಡಿಮೆಯಾದರೆ ಜನರ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದರು.
ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಸಿಂಧೋಗಿಯ ಚಿದಾನಂದ ಸ್ವಾಮೀಜಿ, ವಿರುಪಾಪುರದ ಮುದುಕೇಶ್ವರ ಸ್ವಾಮೀಜಿ, ನಾಗತಿಬಸಾಪುರದ ಗಿರಿರಾಜ ಹಾಲಸ್ವಾಮೀಜಿ, ಮೈನಳ್ಳಿಯ ಸಿದ್ಧೇಶ್ವರ ಸ್ವಾಮೀಜಿ, ಬಳ್ಳಾರಿಯ ಮಲ್ಲಿಕಾರ್ಜುನ ಸ್ವಾಮೀಜಿ, ಉಪನಾಯಕನಹಳ್ಳಿ ದೊಡ್ಡಬಸಯ್ಯ ಶಾಸ್ತ್ರಿ, ಶಿವಕುಮಾರ ಶಾಸ್ತ್ರಿ, ನಿವೃತ್ತ ಪ್ರಾಚಾರ್ಯ ಕೆ.ರವೀಂದ್ರನಾಥ, ಡಾ.ನಾಗನಗೌಡ ಇತರರಿದ್ದರು.