ಜಿಲ್ಲೆ

ಸರಳ ವಿವಾಹದಿಂದ ಅನಗತ್ಯ ಖರ್ಚುಗಳಿಂದ ಮುಕ್ತಿ: ಶ್ರೀ ಮಹಾಂತ ಸ್ವಾಮೀಜಿ

ಶಿಕಾರಿಪುರ: ಸರಳ ವಿವಾಹದಿಂದ ನಾವು ಅನಗತ್ಯ ಖರ್ಚುಗಳಿಂದ ಮುಕ್ತರಾಗುವುದಲ್ಲದೆ ನಮ್ಮ ಮುಂದಿನ ಪೀಳಿಗೆಗೆ ನಮ್ಮ ಬದುಕೇ ಸರಳತೆಯ ನಿದರ್ಶನ ಆಗುವಂತೆ ನಾವು ಬಾಳಬೇಕು ಎಂದು ತೊಗರ್ಸಿ ಮಳೆಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಶನಿವಾರ ಸಮೀಪದ ತೊಗರ್ಸಿ ಕ್ಷೇತ್ರದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 38ನೇ ವರ್ಷದ ಸರಳ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಸರಳ ಸಾಮೂಹಿಕ ವಿವಾಹ ಎಂದಾಗ ನಾವು ಸಂಕುಚಿತ ಭಾವದಿಂದ ನೋಡುವುದನ್ನು ಕಡಿಮೆ ಮಾಡಬೇಕು. ಕೀಳರಿಮೆಯನ್ನು ದೂರ ಮಾಡಿಕೊಳ್ಳಬೇಕು. ಯಾವುದೇ ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರೊಳಗೊಂದಾಗಿ ನಾವು ಬದುಕುವುದನ್ನು ಕಲಿಯಬೇಕು. ಸರಳ ಸಾಮೂಹಿಕ ವಿವಾಹ ಒಂದು ಅದ್ಭುತವಾದ ಕಲ್ಪನೆ ಮತ್ತು ಅತ್ಯಂತ ಸಾಮಾಜಿಕ ಕಳಕಳಿಯುಳ್ಳ ಕಲ್ಪನೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ನಮ್ಮ ಬಂಧುಗಳಿಗೆ ಮಹದಾಸರೆ ಆಗಲಿದೆ ಎಂದರು.

ತೊಗರ್ಸಿ ಕ್ಷೇತ್ರದಲ್ಲಿ ಪಂಚವಣ್ಣಿಗೆ ಮಠದ ಲಿಂಗೈಕ್ಯ ಶ್ರೀಗಳ ಆಶಯದಂತೆ 38 ವರ್ಷಗಳ ಹಿಂದೆ ನಾವು ಜಾತ್ರೆಯಲ್ಲಿ ಸರಳ ಸಾಮೂಹಿಕ ವಿವಾಹ ಆರಂಭಿಸಿದೆವು. ಅದು ಇಂದಿಗೂ ಅನೂಚಾನವಾಗಿ ಎಲ್ಲರ ಸಹಕಾರದಿಂದ ನಡೆದುಕೊಂಡು ಬರುತ್ತಿದೆ. ಕ್ಷೇತ್ರದಲ್ಲಿ ನಡೆಯುವ ಸರಳ ಸಾಮೂಹಿಕ ವಿವಾಹದಲ್ಲಿ ಹೊಸ ಬಾಳಿಗೆ ಕಾಲಿಟ್ಟರೆ ಅದು ಅತ್ಯಂತ ಪುಣ್ಯದಾಯಕ. ನಮ್ಮ ಬಂಧುಗಳಲ್ಲದೆ ಬೇರೆ ಊರುಗಳಿಂದ ಬಂದ ಭಕ್ತಾದಿಗಳು ಕೂಡ ಅಕ್ಷತೆ ಹಾಕಿ ಹರಸುತ್ತಾರೆ. ಇದರಿಂದ ನಿಮ್ಮ ಬಾಳು ಹಸನಾಗುತ್ತದೆ ಎಂದು ಹೇಳಿದರು.

ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಇಂದಿನಿಂದ ನೀವು ಹೊಸ ಬಾಳಿಗೆ ಕಾಲಿಡುತ್ತಿದ್ದೀರಿ. ನಿಮಗೆ ಜನಿಸುವ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ. ಉತ್ತಮ ಶಿಕ್ಷಣ ನೀಡಿ ಅವರನ್ನು ಸಮಾಜಕ್ಕೆ ಕೊಡುಗೆ ಆಗುವಂತೆ ಬೆಳೆಸಬೇಕು. ಹುಟ್ಟಿದ ಮನೆಯನ್ನು ತೊರೆದು ಬಂದ ಮಗಳು ಕೊಟ್ಟ ಮನೆಯನ್ನು ಬೆಳಗುತ್ತಾಳೆ. ಸಂಸಾರದಲ್ಲಿ ಹೊಸ ಸಂಬಂಧಗಳನು ಹುಟ್ಟು ಹಾಕುತ್ತಾಳೆ. ಮನೆಯ ತುಂಬ ಚೈತನ್ಯ, ಗೆಲುವು ತುಂಬುತ್ತಾಳೆ. ಈ ಕ್ಷಣ ವಧು ವರರ ಬಾಳಿನಲ್ಲಿ ಅಮೃತ ಗಳಿಗೆ, ಮಠಗಳು ಮೊದಲು ಯಾವುದೇ ಜಾತಿಯ ಸೋಂಕಿಲ್ಲದ ಹಾಗೆ ಸರಳ ಸಾಮೂಹಿಕ ವಿವಾಹವನ್ನು ಪ್ರಾರಂಭ ಮಾಡಿದವು ಎಂದು ಹೇಳಿದರು.

ತೊಗರ್ಸಿ ಗ್ರಾಪಂ ಉಪಾಧ್ಯಕ್ಷ ನಿರಂಜನ್ ಮಾತನಾಡಿ, ನಿಮ್ಮ ಬದುಕಿನಲ್ಲಿ ಇಂದಿನಿಂದ ಹೊಸ ಮನ್ವಂತರ ಪ್ರಾರಂಭವಾಗಿದೆ. ಪರಸ್ಪರ ಅನ್ಯೋನ್ಯತೆ ಬಹಳ ಮುಖ್ಯ. ಒಬ್ಬರು ಸೋತು ಇನ್ನೊಬ್ಬರು ಗೆಲ್ಲುವುದೇ ಸಂಸಾರ. ಜಗಮೆಚ್ಚುವ ನಾಯಕನ್ನು ಸಮಾಜಕ್ಕೆ ಕೊಡಿ. ವಿಚ್ಛೇದನ ಗಳು ಇಂದಿನ ದಿನಗಳಲ್ಲಿ ಜಾಸ್ತಿ ಆಗುತ್ತಿರುವದು ಬೇಸರದ ಸಂಗತಿ. ನಿಮ್ಮ ಬದುಕಿನಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆಳು ಕಡಿಮೆಯಾಗದಂತೆ ನೋಡಿಕೊಂಡರೆ ನಿಮ್ಮ ಬದುಕು ಬಂಗಾರವಾಗುತ್ತದೆ ಎಂದರು.