ಕಿಕ್ಕೇರಿ: ಜಾತಿ, ವರ್ಗವನ್ನು ವಿರೋಧಿಸಿ ಮಂತ್ರ ಮಾಂಗಲ್ಯದ ಸರಳ ವಿವಾಹ ಬದುಕಿನ ಸೋಪಾನ ಎಂದು ತೋರಿಸಿಕೊಟ್ಟವರು ರಾಷ್ಟ್ರಕವಿ ಕುವೆಂಪು ಎಂದು ನಿವೃತ್ತ ಪ್ರಾಂಶುಪಾಲ ಚಂದ್ರಮೋಹನ್ ತಿಳಿಸಿದರು.
ಪಟ್ಟಣದ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ಭಾನುವಾರ ಏರ್ಪಡಿಸಿದ್ದ 121ನೇ ವಿಶ್ವಮಾನವ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಜನರು ನಿರಂಕುಶಮತಿಗಳಾಗಿ ಸ್ವಂತ ಬುದ್ಧಿಯಿಂದ ಸಾಧನೆ ಮಾಡಿ. ವೇದನೆ ಮಾಡದೆ ಮೂಢನಂಬಿಕೆಗೆ ಬಲಿಯಾಗದೆ, ವೈಜ್ಞಾನಿಕವಾಗಿ ಚಿಂತಿಸಿ. ದೇವರಿದ್ದಾನೆ, ಆದರೆ ಆಡಂಭರ ಬೇಡ. ತಮ್ಮ ಕರ್ಮ, ಕಾಯಕದಲ್ಲಿ ಭಗವಂತನ ಕಾಣಿ ಎಂದವರು. ಪ್ರೇಮಕವಿ ಕಿಕ್ಕೇರಿಯ ಕೆ.ಎಸ್.ನರಸಿಂಹಸ್ವಾಮಿ ಕುವೆಂಪು ಅವರ ನೆಚ್ಚಿನ ಶಿಷ್ಯರಾಗಿದ್ದರು ಎಂಬುದು ಕಿಕ್ಕೇರಿಗೆ ಹೆಮ್ಮೆಯಾಗಿದೆ. ಕುವೆಂಪು ಮಾನಸಗಂಗೋತ್ರಿಯ ಅಡಿಗಲ್ಲು ಹಾಕಿದವರಾಗಿ ಎಲ್ಲೂ ಜಾತಿ ವ್ಯವಸ್ಥೆಗೆ ಅಂಟಿಕೊಳ್ಳದೆ ಸರ್ವರಿಗೂ ಸಮಪಾಲು ಎಂದು ಸಾರಿದರು ಎಂದರು.
ಕನ್ನಡ ಉಪನ್ಯಾಸಕ ಕಿಕ್ಕೇರಿ ವಿನೋದ್‌ಸಿಂಗ್ ಮಾತನಾಡಿ, ಕುವೆಂಪು ಆರಂಭದಲ್ಲಿ ಇಂಗ್ಲಿಷ್ ಕವಿತೆ ಬರೆದರು. ಐರಿಷ್, ಇಂಗ್ಲಿಷ್ ಕವಿಗಳ ಮಾರ್ಗದರ್ಶನದಂತೆ ಕನ್ನಡದ ಕವಿತೆ ಬರೆದು ವಿಶ್ವಮಾನವರಾದರು. ಎರಡು ಭಾಷೆಯಲ್ಲಿ ಬರೆದಿದ್ದರೆ ನೋಬಲ್ ಪ್ರಶಸ್ತಿ ಲಭಿಸುತ್ತಿತ್ತು ಎಂದರು.
ಕವಿ, ಸಾಹಿತಿ, ನಾಟಕಕಾರ, ದಾರ್ಶನಿಕ, ಸಾಮಾಜಿಕ ಹರಿಕಾರರಾಗಿ ರೈತ, ಯೋಧ, ದಾಂಪತ್ಯ, ಪ್ರೇಮ ಕವಿತೆ ಎನ್ನದೆ ಎಲ್ಲ ಮಜಲುಗಳಲ್ಲಿ ಕಾವ್ಯದ ರಸದೌತಣವನ್ನು ನಾಡಿಗೆ ನೀಡಿದ ಇವರು ಬಲುದೊಡ್ಡ ಆಸ್ತಿಯಾಗಿದ್ದಾರೆ ಎಂದು ಸ್ಮರಿಸಿದರು.
ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಿಹಿ ಹಂಚಿ, ಅನ್ನದಾಸೋಹ ಏರ್ಪಡಿಸಿ ಸಂಭ್ರಮಿಸಿದರು.
ಕೆಪಿಸಿಸಿ ಸದಸ್ಯ ಸುರೇಶ್, ಜಿಪಂ ಮಾಜಿ ಸದಸ್ಯ ಕೆ.ಎಸ್.ಪ್ರಭಾಕರ್, ಗ್ರಾಪಂ ಅಧ್ಯಕ್ಷ ಕೆ.ಜಿ.ಪುಟ್ಟರಾಜು, ಮಾಜಿ ಅಧ್ಯಕ್ಷ ಕೆ.ಟಿ. ಪರಮೇಶ್, ಕೇಶವಮೂರ್ತಿ, ಎಸ್.ಕೆ.ಬಾಲಕೃಷ್ಣ, ಕೆ.ಆರ್.ರಾಜೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಕಾಯಿ ಸುರೇಶ್, ಮಾಜಿ ಯೋಧ ಲೋಕೇಶ್, ಮೋಹನ್, ಕೆ.ಜೆ.ರಾಜಣ್ಣ, ಐಕನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಅಂಕನಹಳ್ಳಿ ಮಂಜೇಗೌಡ, ಕೆ.ಪಿ. ಮಧುಕರ್, ಸತ್ಯ, ರಾಯಲ್ ನಾಗರಾಜು, ಗೃಹರಕ್ಷಕದಳ ನಿವೃತ್ತ ಅಧಿಕಾರಿ ಕೆ.ಎನ್. ಚಂದ್ರಶೇಖರಯ್ಯ, ಕೆ.ಎನ್. ಹರೀಶ್, ಕೆ.ಎನ್. ನಾಗರಾಜು, ಮಹದೇವು, ರಮೇಶ್, ಅರ್ಜುನ್, ರಘುಪ್ರಸಾದ್, ಬಾಬು, ಕುಮಾರ್ ಮತ್ತಿತರರಿದ್ದರು.