ಜಿಲ್ಲೆ

ಸರಗೂರು ತಾಲೂಕು ಆರೋಗ್ಯ ಅಧಿಕಾರಿ ನೇಮಕಕ್ಕೆ ಕ್ರಮ

Mysuru

ಎಚ್.ಡಿ.ಕೋಟೆ: ಕಾನೂನು ಹಾಗೂ ಹಣಕಾಸು ಇಲಾಖೆಯಿಂದ ಆಡಳಿತ ಮಂಜೂರಾತಿ ದೊರೆತ ತಕ್ಷಣ ಸರಗೂರು ತಾಲೂಕಿಗೆ ಆರೋಗ್ಯ ಅಧಿಕಾರ ನೇಮಕ ಮಾಡಲು ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ವಿಧಾನಸಭೆಯಲ್ಲಿ ಹೇಳಿದರು.


ಬೆಳಗಾವಿ ಅಧಿವೇಶನದಲ್ಲಿ ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಚುಕ್ಕಿ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, 2017-18ನೇ ಸಾಲಿನಲ್ಲಿ ರಾಜ್ಯದಲ್ಲಿ 50 ಹೊಸ ತಾಲೂಕುಗಳನ್ನು ಘೋಷಣೆ ಮಾಡಲಾಯಿತು. ಅದರಲ್ಲಿ ಸರಗೂರು ತಾಲೂಕು ಸೇರಿದೆ. ಈಗಾಗಲೇ ಸರಗೂರಿನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಜಮೀನು ಇಲ್ಲದೆ ಇರುವುದರಿಂದ ಹಾಗೂ ಅನುದಾನ ಕೊರತೆಯಿಂದ ಹೊಸ ಆಸ್ಪತ್ರೆ ಕಟ್ಟಡವನ್ನು ಕಟ್ಟಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.


ಜಮೀನು ಸ್ವಾಧೀನ ಮಾಡಲು ಸರ್ಕಾರದಲ್ಲಿ ಅವಕಾಶವಿದೆ. ಜಿಲ್ಲಾಧಿಕಾರಿ ಮೂಲಕ ಭೂ ಸ್ವಾಧೀನ ಮಾಡಿಕೊಂಡು ಹಣಕಾಸು ಲಭ್ಯತೆ ಮೇಲೆ ಹೊಸ ಕಟ್ಟಡ ಕಟ್ಟಲು ಸರಗೂರು ತಾಲೂಕಿಗೆ ಪ್ರಾತಿನಿಧ್ಯ ನೀಡಲಾಗುತ್ತದೆ. ತಾಲೂಕು ಆರೋಗ್ಯ ಅಧಿಕಾರಿ ನೇಮಕದಲ್ಲಿ ಕಾನೂನು ಹಾಗೂ ಹಣಕಾಸು ಇಲಾಖೆಯಿಂದ ಆಡಳಿತ ಮಂಜೂರಾತಿ ಪಡೆಯಬೇಕಾಗಿದೆ. ಕೇವಲ ಸರಗೂರು ತಾಲೂಕಿನ ಒಂದರಲ್ಲೇ ಟಿಎಚ್‌ಒ ಸಮಸ್ಯೆ ಇಲ್ಲ. ಹೊಸದಾಗಿ ರಚನೆಯಾದ 50 ತಾಲೂಕಿನಲ್ಲೂ ಸಮಸ್ಯೆ ಇದ್ದು ಆಡಳಿತ ಮಂಜೂರಾತಿ ದೊರಕಿದ ತಕ್ಷಣ ಕ್ರಮವಹಿಸಲಾಗುತ್ತದೆ ಎಂದರು.


ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಸರಗೂರು ತಾಲೂಕು ಘೋಷಣೆಯಾಗಿ 6 ವರ್ಷ ಕಳೆದರೂ ತಾಲೂಕು ಆಸ್ಪತ್ರೆ ನಿರ್ಮಾಣ ಆಗಿಲ್ಲ. ತಾಲೂಕು ಆರೋಗ್ಯ ಅಧಿಕಾರಿ ನೇಮಕ ಮಾಡಿಲ್ಲ. ಸರಗೂರು ತಾಲೂಕಿನಲ್ಲಿ 1 ಸಮುದಾಯ ಆರೋಗ್ಯ ಕೇಂದ್ರ, 7 ಪ್ರಾಥಮಿಕ ಆರೋಗ್ಯ ಕೇಂದ್ರ, 1 ಸಂಚಾರ ಗಿರಿಜನ ಆರೋಗ್ಯ ಘಟಕ, 35 ಉಪಕೇಂದ್ರ ಇದ್ದು, ತಾಲೂಕು ಕೇಂದ್ರದಲ್ಲಿ ತಾಲೂಕು ಆಸ್ಪತ್ರೆ, ತಾಲೂಕು ಆರೋಗ್ಯ ಅಧಿಕಾರಿಗಳು ಇಲ್ಲ. ವಿಸ್ತೀರ್ಣದಲ್ಲಿ ದೊಡ್ಡ ತಾಲೂಕು, ಹೆಚ್ಚು ಕಾಡಂಚಿನ ಗ್ರಾಮಗಳಿದ್ದು, ಆದಿವಾಸಿ, ಪರಿಶಿಷ್ಟ ಜಾತಿ ಹಾಗೂ ವರ್ಗದ ಜನರಿದ್ದು ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಎಚ್.ಡಿ.ಕೋಟೆ ಅಥವಾ ಮೈಸೂರಿಗೆ ತೆರಳಬೇಕಾಗಿದೆ. ಇದರಿಂದ ತೊಂದರೆಯಾಗಿದೆ. ಹಾಗಾಗಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.