ಅಳವಂಡಿ: ಸರ್ಕಾರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಹಣ ವ್ಯಯಿಸಿ ಸೌಲಭ್ಯಗಳನ್ನು ನೀಡಿದೆ. ಮಕ್ಕಳು ಈ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾವಂತರಾಗಬೇಕು. ಕಾರಣ ಮಕ್ಕಳನ್ನು ಪಾಲಕರು ಶಾಲೆಗೆ ಕಳುಹಿಸಬೇಕು. ಶಿಕ್ಷಣವೇ ಮಕ್ಕಳಿಗೆ ದೊಡ್ಡ ಆಸ್ತಿ ಎಂದು ಎಸ್ಡಿಎಂಸಿ ಅಧ್ಯಕ್ಷ ಯಮನೂರಪ್ಪ ಚಿಕ್ಕಣ್ಣವರ ತಿಳಿಸಿದರು.
ಸಮೀಪದ ಹಟ್ಟಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯಿಂದ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಸಲುವಾಗಿ ನಡೆದ ಪಾಲಕರ ಮನೆಯತ್ತ ಅಭಿಯಾನಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು.
ಯಾವ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತವಾಗಬಾರದೆಂಬ ಉದ್ದೇಶದಿಂದ, ಶಾಲೆ ಬಿಟ್ಟ ಮಕ್ಕಳ ಮನೆಗೆ ಶಿಕ್ಷಕರು ಹಾಗೂ ಎಸ್ಡಿಎಂಸಿ ತಂಡ ಭೇಟಿ ನೀಡಿ ಪಾಲಕರ ಹಾಗೂ ಮಕ್ಕಳ ಮನವೊಲಿಸುತ್ತಿದೆ ಎಂದರು. ಮುಖ್ಯ ಶಿಕ್ಷಕ ವೀರಣ್ಣ ಮಟ್ಟಿ, ಶಿಕ್ಷಣ ಪ್ರೇಮಿ ಡಾ.ಕುಂಬಾರ, ಶಿಕ್ಷಕರಾದ ಪ್ರಶಾಂತ ಹಿರೇಮಠ, ರವಿಕುಮಾರ, ಹಂಪವ್ವ ಪೂಜಾರ ಇದ್ದರು.