ಜಮಖಂಡಿ ತಾಲೂಕಿನ ಆಲಗೂರ ಗ್ರಾಮದ ಮೃತನ ಕುಟುಂಬದ ಸದಸ್ಯರಿಗೆ ಶಾಸಕ ನಾಡೋಜ ಜಗದೀಶ ಗುಡಗುಂಟಿ ಸರ್ಕಾರದ 5 ಲಕ್ಷ ರೂ. ಮೊತ್ತದ ಸ್ವೀಕೃತಿ ಪತ್ರವನ್ನು ವಿತರಿಸಿದರು. ಶಾಸಕ ಅರವಿಂದ ಬೆಲ್ಲದ, ಸಂಸದ ಪಿ.ಸಿ. ಗದ್ದಿಗೌಡರ, ವಿಪ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ ಇತರರಿದ್ದರು.  
ಜಿಲ್ಲೆ

ಸರ್ಕಾರ ಸಂತ್ರಸ್ತರಿಗೆ ಸ್ಪಂದಿಸುವ ಕೆಲಸ ಮಾಡಲಿ

ಜಮಖಂಡಿ: ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರವಾಹ ಉಂಟಾದರೂ ಸರ್ಕಾರ ಸಂತ್ರಸ್ತರಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ರೈತರ ಜಾನುವಾರುಗಳಿಗೆ ಮೇವು ನೀಡುತ್ತಿಲ್ಲ ಎಂದು ಬಿಜೆಪಿ ಶಾಸಕಾಂಗ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದರು.

ತಾಲೂಕಿನ ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಗಳಿಗೆ ಹಾಗೂ ಚಿಕ್ಕಪಡಸಲಗಿ ಶ್ರಮಬಿಂದು ಸಾಗರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದಲ್ಲಿ 2019-20ರ ನಂತರ ಅತಿ ದೊಡ್ಡ ಮಳೆ ಪ್ರವಾಹ ಆಗುತ್ತಿದೆ. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇನ್ನೂ ಸಂಪುಟ ಆಗರದಿದ್ದರೂ ಏಕಾಂಗಿಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರ ಅವಶ್ಯಕತೆಗಳಿಯಿರುವುದನ್ನೆಲ್ಲಾ ಪೂರೈಸುವ ಕೆಲಸ ಮಾಡಿದ್ದರು. ಆದರೆ, ಇಂದು ರಾಜ್ಯ ಸರ್ಕಾರ ಸಂಪೂರ್ಣ ಕಡೆಗಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿದ್ದ ಮನೆಗಳಿಗೆ ಅಂದು 5 ಲಕ್ಷ ರೂ. ನೀಡಿದ್ದರು. ಆದರೆ, ಈಗಿನ ಸರ್ಕಾರ 1.20 ಲಕ್ಷ ರೂ. ಕೊಡುತ್ತಿದೆ. ಬಿದ್ದ ಮನೆಗಳಿಗೆ 7 ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.

ಈ ಭಾಗದಲ್ಲಿ ಮೇಲಿಂದ ಮೇಲೆ ಏಕೆ ಪ್ರವಾಹ ಆಗುತ್ತದೆ ಎಂಬುದಕ್ಕಾಗಿ ಸೂಕ್ತ ತಜ್ಞರನ್ನು ಕಳುಹಿಸಿ ಅಧ್ಯಯನ ಮಾಡಿ ತಾಂತ್ರಿಕವಾಗಿ ಪರಿಹಾರ ಒದಗಿಸುವ ಕಾರ್ಯ ಮಾಡಿಸಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.

ಶಾಸಕ ನಾಡೋಜ ಜಗದೀಶ ಗುಡಗುಂಟಿ ಆಲಗೂರ ಹಾಗೂ ಕಡಕೋಳ ಗ್ರಾಮದಲ್ಲಿ ಪ್ರವಾಹದಲ್ಲಿ ಮೃತಪಟ್ಟ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ತಿಳಿಸಿದರು. ಸರ್ಕಾರದಿಂದ ನೀಡಲಾದ ತಲಾ 5 ಲಕ್ಷ ರೂ. ಮೊತ್ತದ ಸ್ವೀಕೃತಿ ಪತ್ರ ವಿತರಿಸಿದರು.

ಸಂಸದ ಪಿ. ಸಿ. ಗದ್ದಿಗೌಡರ, ವಿಧಾನ ಪರಿಷತ್ ಮಾಜಿ ಸದಸ್ಯ ಜಿ. ಎಸ್. ನ್ಯಾಮಗೌಡ, ವಿಭಾಗ ಸಹ ಪ್ರಭಾರಿ ಬಸವರಾಜ ಯಂಕಂಚಿ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಟಿ. ಉಪಾಧ್ಯೆ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಹಣಮಂತ ಮಾವಿನಮರದ, ತಾಲೂಕು ಅಧ್ಯಕ್ಷ ಚನಬಸಪ್ಪ ಕತಾಟೆ, ಸುಭಾಷ ಲಗಳಿ, ಪ್ರದೀಪ ನಂದೆಪ್ಪನವರ, ಗಣೇಶ ಶಿರಗಣ್ಣವರ, ಮಹಾದೇವ ನ್ಯಾಮಗೌಡ, ಸಂಗು ದಳವಾಯಿ, ಕುಶಾಲ ವಾಘ್ಮೋರೆ, ರಾಜು ಚಿಕನಾಳ, ಸಿದ್ದು ನ್ಯಾಮಗೌಡ, ರಾಜು ಇಂಗಳಗಾಂವಿಮಠ, ಮಹಾದೇವ ಕದಮ, ರಾಜು ಗೆಣ್ಣೂರ, ಶ್ರೀಧರ ಕಂಬಿ ಇತರರಿದ್ದರು.