ಜಿಲ್ಲೆ

ಸರ ಕದ್ದು ಓಡಿ ಹೋಗಿದ್ದ ಹಳೆ ಕಳ್ಳನ ಬಂಧನ

ಮೈಸೂರು: ಗ್ರಾಹಕನ ಸೋಗಿನಲ್ಲಿ ಬಂದು ಜುವೆಲ್ಲರಿ ಅಂಗಡಿಯಲ್ಲಿ 40 ಗ್ರಾಂ ತೂಕದ ಎರಡು ಚಿನ್ನದ ಸರ ಕಳವು ಮಾಡಿದ್ದ ಹಳೇ ಕಳ್ಳನನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರದ ವ್ಯಕ್ತಿ ಬಂಧಿತನಾಗಿದ್ದು, ಈತನಿಂದ 2 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ಎರಡು ಸರ ವಶಪಡಿಸಿಕೊಳ್ಳಲಾಗಿದೆ. ನಗರದ ಅಶೋಕ ರಸ್ತೆಯಲ್ಲಿರುವ ಶ್ರೀಹರಿ ಜುವೆಲ್ಲರ್ಸ್‌ಗೆ ಆಗಸ್ಟ್ 7ರಂದು ಗ್ರಾಹಕನ ಸೋಗಿನಲ್ಲಿ ಬಂದ ಆರೋಪಿ, ಸರ ಖರೀದಿಸುವಂತೆ ನಾಟಕವಾಡಿದ್ದಾನೆ. ಬಳಿಕ ಎರಡು ಸರ ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ. ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ಲಷ್ಕರ್ ಠಾಣೆ ಪೊಲೀಸರು ಪತ್ತೆ ಕಾರ್ಯ ಕೈಗೊಂಡಿದ್ದರು.
ಖಚಿತ ಮಾಹಿತಿ ಮೇರೆಗೆ ತಂಡ ಆ.17ರಂದು ಹೊಳೆನರಸೀಪುರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಆರೋಪಿಯ ವಿರುದ್ಧ ಕೊಣನೂರು, ಹಾಸನ ಟೌನ್, ಚನ್ನರಾಯಪಟ್ಟಣ ಪೊಲೀಸ್ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.
ದೇವರಾಜ ಉಪ ವಿಭಾಗದ ಎಸಿಪಿ ಶಾಂತಮಲ್ಲಪ್ಪ ನೇತೃತ್ವದಲ್ಲಿ ಲಷ್ಕರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಆರ್.ಪ್ರಸಾದ್, ಪಿಎಸ್‌ಐ ಚಂದ್ರಶೇಖರ ಮಾಗಣಗೇರಿ, ಸಿಬ್ಬಂದಿ ಲೋಕೇಶ್, ಚೇತನ್, ಚಿನ್ನಪ್ಪ ಮಾ ಕಲ್ಲೋಳಿ, ಮಂಜುನಾಥ್, ಲಾಳೇಸಾಬ್ ನದಾಫ್, ಮಂಜುನಾಥ್ ಗದಗೈಗೊಳ, ಸಿಡಿಆರ್ ವಿಭಾಗದ ಪಿ.ಕುಮಾರ್ ತಂಡದಲ್ಲಿದ್ದರು.