ಬೇಲೂರು: ಮಾರ್ಚ್ 7 ಮತ್ತು 8ರಂದು ಬೇಲೂರಿನಲ್ಲಿ ನಡೆಯಲಿರುವ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಇಂದಿರಮ್ಮ ನಿವಾಸಕ್ಕೆ ತಾಲೂಕು ಕಸಾಪ ಅಧ್ಯಕ್ಷ ಬಿ.ಎಲ್.ರಾಜೇಗೌಡ ಹಾಗೂ ಪದಾಧಿಕಾರಿಗಳು ಭೇಟಿನೀಡಿ ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಬಿ.ಎಲ್.ರಾಜೇಗೌಡ ಮಾತನಾಡಿ, ಬೇಲೂರಿನ ಸಾಹಿತಿ ಹಾಗೂ ಗಮಕ ಕಲಾವಿದೆ ಇಂದಿರಮ್ಮ, ಸಾಲುಮರದ ತಿಮ್ಮಕ್ಕರ ಬಗ್ಗೆ ಕವನ ಸಂಕಲನ ಬಿಡುಗಡೆ ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಐದಕ್ಕೂ ಹೆಚ್ಚಿನವು ಹಸ್ತಪ್ರತಿಯಿಂದ ಪುಸ್ತಕ ರೂಪ ಪಡೆದಿವೆ. ಇಂದಿರಮ್ಮ ಅವರು ಹರಿಕಥೆ, ಗಮಕ ವಾಚನ, ರಂಗಭೂಮಿ ಹಾಗೂ ಭಜನೆಯಂತಹ ಗೀತೆಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದಾರೆ. ಅವರು ಕನ್ನಡ ಪರ ಸಂಘಟನೆಯಲ್ಲಿ ಹೋರಾಟ ನಡೆಸಿದ್ದಾರೆ. ಕಸಾಪದ ಸಕ್ರಿಯ ಸದಸ್ಯರಾಗಿ ವಿವಿಧ ಹುದ್ದೆ ಅಲಂಕರಿಸಿ ಅದಕ್ಕೆ ಗೌರವ ಸಲ್ಲಿಸಿದ್ದಾರೆ. ಜತೆಗೆ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇಂತಹವರನ್ನು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಆತ್ಮೀಯವಾಗಿ ಸಮ್ಮೇಳನಕ್ಕೆ ಆಹ್ವಾನಿಸುತ್ತಿದ್ದೇವೆ ಎಂದರು
ತಾಲೂಕು ಕಸಾಪ ಸಮ್ಮೇಳಾನಾಧ್ಯಕ್ಷೆ ಇಂದಿರಮ್ಮ ಮಾತನಾಡಿ, ಬೇಲೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ನನ್ನನ್ನು 9ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಸಂತೋಷವಾಗಿದೆ. ಕಳೆದ ನಾಲ್ಕು ದಶಕದಿಂದ ಬೇಲೂರು ಪರಿಷತ್ತು ಅತ್ಯುತ್ತಮ ಕಾರ್ಯ ಚಟುವಟಿಕೆ ನಡೆಸುತ್ತಾ ಬಂದಿದೆ. ಬೇಲೂರಿನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ಇತರರಿಗೆ ಮಾದರಿಯಾಗಲಿ ಎಂದರು.
ತಾಲೂಕು ಕಸಾಪ ಗೌರವಾ ಕಾರ್ಯದರ್ಶಿ ಬಿ.ಬಿ.ಶಿವರಾಜ್, ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ಕಸಾಪ ಮಾಜಿ ಅಧ್ಯಕ್ಷ ಮ.ಶಿವಮೂರ್ತಿ, ಸಾಹಿತಿ ಪಲ್ಲವಿ, ಪುರಸಭಾ ಮಾಜಿ ಅಧ್ಯಕ್ಷೆ ಮುದ್ದಮ್ಮ, ಕಲಾವಿದ ಚನ್ನಕೇಶವೇಗೌಡ, ಬಿ.ಸಿ.ಅನಂದ, ಪತ್ರಕರ್ತ ಹೆಬ್ಬಾಳು ಹಾಲಪ್ಪ, ಗಣೇಶ್ ಮತ್ತಿತರರಿದ್ದರು.