ಬಾಗಲಕೋಟೆ: ತಾಲೂಕಿನ ಶಿರೂರು ಗ್ರಾಮದಲ್ಲಿ ಜಿಲ್ಲಾ ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಪ್ರಯುಕ್ತ ಸಮ್ಮೇಳನದ ಸರ್ವಾಧ್ಯಕ್ಷ, ಡಾ.ವೆಂಕಪ್ಪ ಸುಗತೇಕರ ಅವರ ಭವ್ಯ ಮೆರವಣಿಗೆ ನೋಡುಗರ ಗಮನ ಸೆಳೆಯಿತು.
ಕನ್ನಡ ಜಾನಪದ ಪರಿಷತ್ತು ಜಿಲ್ಲಾ ಘಟಕ ಹಾಗೂ ತಾಲೂಕು ಘಟಕ ಸಯುಕ್ತವಾಗಿ ಏರ್ಪಡಿಸಿದ ಜಿಲ್ಲಾ ಮಟ್ಟದ ಪ್ರಥಮ ಕನ್ನಡ ಜಾನಪದ ಸಮ್ಮೇಳನದ ನಿಮಿತ್ತ ಶಿರೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸರ್ವಾಧ್ಯಕ್ಷ ಡಾ. ವೆಂಕಪ್ಪ ಸುಗತೇಕರ ಅವರ ಆಕರ್ಷಕ ಮೆರವಣಿಗೆ ಸಕಲ ಜನಪದ ವಾದ್ಯ ಮೇಳಗಳೊಂದಿಗೆ ಅದ್ದೂರಿಯಾಗಿ ಜರುಗಿತು.
ಗ್ರಾಮೀಣ ಬದುಕಿನ ಸೊಗಡು ಸೂಸುವ ಚಕ್ಕಡಿಯ (ಬಂಡಿ) ಮೇಲೆ ಸರ್ವಾಧ್ಯಕ್ಷರನ್ನು ಕೂಡಿಸಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಹಳಷ್ಟು ಆಕರ್ಷಕವಾಗಿ ಮೆರವಣಿಗೆ ನಡೆಸಲಾಯಿತು. ಸಮ್ಮೇಳನದ ಸರ್ವಾಧ್ಯಕ್ಷರ ಈ ಭವ್ಯ ಮೆರವಣಿಗೆಯಲ್ಲಿ ವಿವಿಧ ಜನಪದ ಕಲಾತಂಡಗಳು ಭಾಗವಹಿಸಿ ಮೆರವಣಿಗೆಗೆ ವಿಶೇಷ ಕಳೆ ತಂದವು. ಜಾನಪದ ಕಲಾವಿದ ಲಕ್ಷ್ಮಪ್ಪ ಬಾರಡ್ಡಿ ಅವರು ಸರ್ವಾಧ್ಯಕ್ಷ ರ ಮೆರವಣಿಗೆಗೆ ಚಾಲನೆ ನೀಡಿದರು. ಹಾನಾಪುರ ಎಸ್. ಪಿ. ಗ್ರಾಮದ ವಿಠ್ಠಲï ಮುಂದಿನಮನಿ ಅವರ ಲಂಬಾಣಿ ಕುಣಿತ, ಶಿರೂರು ನೀಲಾನಗರ ಗ್ರಾಮದ ರಂಗನಗೌಡ ಗೌಡ್ರು ಅವರ ಮಹಿಳಾ ಜನಪದ ಲಂಬಾಣಿ ಕುಣಿತ ಮೆರವಣಿಗೆಗೆ ವಿಶೇಷ ಕಳೆತಂದವು.
ಅದರೊಂದಿಗೆ ಶಿರೂರು ಗ್ರಾಮದ ಬೀರಲಿಂಗೇಶ್ವರ ಡೊಳ್ಳಿನ ತಂಡ, ಗೋವುನಕೊಪ್ಪ ಗ್ರಾಮದ ಬೀರಲಿಂಗೇಶ್ವರ ಮಹಿಳಾ ಹಾಗೂ ಪುರುಷ ಡೊಳ್ಳು ಕುಣಿತ, ಗುಳೇದಗುಡ್ಡ ತಾಲೂಕು ಆಸಂಗಿ ಗ್ರಾಮದ ಪವಿತ್ರಾ ಜಕ್ಕಪ್ಪನವರ ಅವರ ಮಹಿಳಾ ಕಲಾತಂಡ, ಅಚನೂರು ಗ್ರಾಮದ ಜೈ ಹನುಮಾನ ಹಲಿಗೆ ವಾದನ ಹಾಗೂ ಕೊಳಲು ವಾದನ ತಂಡ, ಗುಳೇದಗುಡ್ಡದ ಶಂಕರ ಮುಂದಿನಮನಿ ಜ್ಞಾನ ಸಿಂಧು ಹಲಗೆ ವಾದನ ತಂಡ, ಬಸವರಾಜ ಸಿಂದಗಿಮಠ, ಚಿದಾನಂದ ಕಾಟವಾ ಕಲಾ ತಂಡಗಳು ಮೆರವಣಿಗೆ ಮೆರಗು ಹೆಚ್ಚಿಸಿದವು.
ಕನ್ನಡ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಡಿ.ಎಂ.ಸಾಹುಕಾರ, ಪ್ರಕಾಶ ಬಾಳಕ್ಕನವರ, ಜಿ.ಕೆ.ತಳವಾರ, ಸುರೇಶ ವಿ., ನಿಂಗರಾಜ ಮಬ್ರುಕರ, ಡಾ.ಎಸ್.ಬಿ.ಹಂಚಿನಾಳ, ರಾಜು ಬರಗಿ, ವಿ.ಜಿ .ಪಾಟೀಲ, ತಾಲೂಕು ಅಧ್ಯಕ್ಷ ಎಸ್.ಬಿ. ಕಟಗಿ, ನಾರಾಯಣ ಯಳಿಗುತ್ತಿ, ಸಂಜಯ ನಡುವಿನಮನಿ, ಸುನೀಲ ಪಾಟೀಲ ಸೇರಿದಂತೆ ಇತರರು ಇದ್ದರು.