ಮೈಸೂರು: ಜಾರ್ಖಂಡ್ ರಾಜ್ಯದ ಗಿರಿಡಿ ಜಿಲ್ಲೆಯ ಜೈನರ ಪವಿತ್ರ ಹಾಗೂ ಪ್ರಾಚೀನ ತೀರ್ಥಂಕರರ ಮೋಕ್ಷ ತಾಣವಾದ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವನ್ನಾಗಿಸುವ ಕ್ರಮಕ್ಕೆ ನಗರದ ದಿಗಂಬರ ಜೈನ ಸಮಾಜ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರವಾಸಿ ತಾಣವನ್ನಾಗಿಸಲು ಜಾರ್ಖಂಡ್ ಪ್ರವಾಸೋದ್ಯಮ ಇಲಾಖೆ ನೀಡಿರುವ ಅನುಮೋದನೆಯಿಂದ ಪವಿತ್ರ ಸ್ಥಳದಲ್ಲಿ ಮದ್ಯ, ಮಾಂಸ, ಅನೈತಿಕ ಚಟುವಟಿಕೆ ಹೆಚ್ಚುವ ಆತಂಕವಿದೆ. ಆದ್ದರಿಂದ ಅಲ್ಲಿನ ಸರ್ಕಾರ ತನ್ನ ಆದೇಶ ವಾಪಸ್ ಪಡೆಯಬೇಕು ಎಂದು ಸಮಾಜದ ಕಾರ್ಯದರ್ಶಿ ಸುನೀಲ್‌ಕುಮಾರ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಜಾರ್ಖಂಡ್ ಸರ್ಕಾರದ ಈ ಆದೇಶ ವಿರೋಧಿಸಿ ಡಿ.19ರಂದು ಬೆಳಗ್ಗೆ 10ಕ್ಕೆ ನಗದಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಮೂಲಕ ಅಲ್ಲಿನ ಮುಖ್ಯಮಂತ್ರಿ ಹಾಗೂ ಪ್ರಧಾನಿಗೆ ಮನವಿಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಮ್ಮೇದ ಶಿಖರ್ಜಿ ಜೈನ ಧರ್ಮದ ಅಹಿಂಸಾ ತತ್ವ ಸಾರಿದ 24 ತೀರ್ಥಂಕರರಲ್ಲಿ 20 ತೀರ್ಥಂಕರರು ತಮ್ಮ ಮುನಿ ಸಂಘಗಳ ಜತೆಗೆ ಮೋಕ್ಷ ಪಡೆದ ಪವಿತ್ರ ಸ್ಥಳವಾಗಿದೆ. ಇನ್ನು ಅಲ್ಪಸಂಖ್ಯಾತರಲ್ಲೇ ಅಲ್ಪಸಂಖ್ಯಾತರಾದ ಜೈನ ಧರ್ಮದವರನ್ನು ರಕ್ಷಿಸಲು ಕೇಂದ್ರ ಸರ್ಕಾರ ಮುಂದಾಗಬೇಕು. ಆದರೆ ಜಾರ್ಖಂಡ್ ರಾಜ್ಯ ಸಮ್ಮೇದ ಶಿಖರ್ಜಿಯನ್ನು ಪ್ರವಾಸೋದ್ಯಮ ತಾಣವಾಗಿಸುವ ಮೂಲಕ ಮೋಜು, ಮಸ್ತಿಗೆ ಅವಕಾಶ ಮಾಡಿಕೊಟ್ಟಿರುವುದು ಜೈನ ತೀರ್ಥಂಕರರ ಕ್ಷೇತ್ರದ ಪಾವಿತ್ರ್ಯ ನಾಶ ಮಾಡುವಂತಿದೆ. ಹೀಗಾಗಿ ಜಾರ್ಖಂಡ್ ಸರ್ಕಾರ ತನ್ನ ಆದೇಶ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ಮಹೇಶ್‌ಪ್ರಸಾದ್, ಭರತ್‌ರಾಜ್, ಲತಾ ಸುದರ್ಶನ್, ನಿರ್ಮಲ ಇದ್ದರು.