ಚಿಕ್ಕೋಡಿ: ಜೈನ ಧರ್ಮದ ಪವಿತ್ರ ಕ್ಷೇತ್ರವಾದ ಸಮ್ಮೇದ ಶಿಖರಜಿಯನ್ನು ಪ್ರವಾಸಿ ತಾಣವನ್ನಾಗಿ ಮಾಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿರುವುದು ಸಂತಸದ ವಿಷಯ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ ತಿಳಿಸಿದರು.
ಪಟ್ಟಣದ ಕುಂದಾಚಾರ್ಯ ಶಾಲೆಯಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಮ್ಮೇದ ಶಿಖರಜಿಯನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಸರ್ಕಾರ ಚಿಂತನೆ ನಡೆಸಿದ್ದರಿಂದ ದೇಶಾದ್ಯಂತ ಜೈನ ಸಮುದಾಯದಿಂದ ಪ್ರತಿಭಟನೆ ನಡೆದಿತ್ತು. ಸರ್ಕಾರ ನಿರ್ಧಾರ ಹಿಂಪಡೆದಿರುವುದು ಸಂತಸ ತಂದಿದೆ. ರಾಜ್ಯದಲ್ಲಿ ಜೈನ್ ಬೋರ್ಡ್ ಸ್ಥಾಪನೆ ಬಗ್ಗೆ ಭರವಸೆ ಸಿಕ್ಕಿದೆ. ಹಿರೇಕೋಡಿ ಗ್ರಾಮದಲ್ಲಿ ಜೈನಮುನಿ ನಂದಿಕುಮಾರ ಹತ್ಯೆಯ ಪ್ರಕರಣವನ್ನು ತನಿಖಾ ಹಂತದಲ್ಲಿದ್ದು ಮುಂಬರುವ ದಿನಗಳಲ್ಲಿ ಜೈನಮುನಿಗಳಿಗೆ ಸಂರಕ್ಷಣೆ ಒದಗಿಸಬೇಕು. ಜೈನಮುನಿಗಳು ವಿಹಾರಕ್ಕೆ ಹೋಗುವಾಗ ಸಂರಕ್ಷಣೆ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ ಷಾ ಹಾಗೂ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಮನವಿ ಮಾಡಲಾಗಿದೆ ಎಂದರು.
ವಕೀಲ ಎಸ್.ಟಿ.ಮುನ್ನೋಳಿ, ಡಾ.ಪದ್ಮರಾಜ ಪಾಟೀಲ, ಶಿರೀಶ್ ಮೆಹ್ತಾ, ವರ್ಧಮಾನ ಸದಲಗೆ, ಅಮಿತ ಶಾ ಇತರರಿದ್ದರು.