ಹುಮನಾಬಾದ್ ಹತ್ತಿರದ ಮಾಣಿಕನಗರದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಹಿಂದು ಪರಿಷತ್‌ನ ಉತ್ತರ ಪ್ರಾಂತ ಕಾರ್ಯಕಾರಿಣಿ ಸಭೆಯನ್ನು ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕಕುಮಾರ, ಶ್ರೀ ಘನಲಿಂಗ ಶಿವಾಚಾರ್ಯ ಉದ್ಘಾಟಿಸಿದರು. ಲಿಂಗರಾಜಪ್ಪ ಅಪ್ಪ, ಗಂಗಾಧರ ಹೆಗಡೆ, ಕೇಶವರಾಜು, ಶಿವಕುಮಾರ ಬೋಳಶೆಟ್ಟಿ ಇದ್ದರು. 
ಜಿಲ್ಲೆ

ಸಮೃದ್ಧ ಭಾರತಕ್ಕಾಗಿ ಹಿಂದುಗಳು ಸಂಘಟಿತರಾಗಿ

ಹುಮನಾಬಾದ್: ಹಿಂದುಗಳು ಸಮಾಜ ಜಾತಿ, ಮತ, ಪಂಗಡ, ಪಕ್ಷ, ಪ್ರಾಂತೀಯತೆ, ಭಾಷಾ ಭೇದಗಳು ಬದಿಗಿಟ್ಟು ಸಂಘಟಿತರಾದಾಗ ಮಾತ್ರ ಸಶಕ್ತ ಮತ್ತು ಸಮೃದ್ಧ ಭಾರತ ನಿರ್ಮಾಣ ಸಾಧ್ಯ ಎಂದು ವಿಶ್ವ ಹಿಂದು ಪರಿಷತ್ (ವಿಎಚ್‌ಪಿ) ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕಕುಮಾರ ಪ್ರತಿಪಾದಿಸಿದರು.

ಪಟ್ಟಣದ ಹತ್ತಿರದ ಮಾಣಿಕನಗರದ ಮಾಣಿಕ ಸೌಧದಲ್ಲಿ ಎರಡು ದಿನ ಆಯೋಜಿಸಿರುವ ವಿಶ್ವ ಹಿಂದು ಪರಿಷತ್‌ನ ಉತ್ತರ ಪ್ರಾಂತ ಕಾರ್ಯಕಾರಿಣಿ ಸಭೆಗೆ ಶನಿವಾರ ಚಾಲನೆ ನೀಡಿದ ಮಾತನಾಡಿದ ಅವರು, ಹಿಂದು ಏಕತೆಯೇ ಬಲಿಷ್ಠ ಭಾರತದ ಮೂಲಾಧಾರಾವಾಗಿದೆ. ಆಂತರಿಕವಾಗಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರುವುದು ಸಹಜ. ಆದರೆ ಇವು ಯಾವತ್ತೂ ರಾಷ್ಟçದ ಹಿತ ಹಾಗೂ ಅಭಿವೃದ್ಧಿಗೆ ಅಡ್ಡಿಯಾಗಬಾರದು ಎಂದು ಹೇಳಿದರು.

ಹಿಂದು ಸಮಾಜ ಸಂಘಟಿತವಾದರೆ ಯಾವುದೇ ಬಾಹ್ಯ ಶಕ್ತಿಗಳು ನಮ್ಮ ದೇಶದ ಪ್ರಗತಿಗೆ ಅಡ್ಡಿಯಾಗಲು ಸಾಧ್ಯವಿಲ್ಲ. ಹಿಂದು ಸಂಸ್ಕೃತಿ ಎಲ್ಲರನ್ನೂ ಹಾಗೂ ಎಲ್ಲವನ್ನೂ ಒಗ್ಗೂಡಿಸುವ ಶಕ್ತಿ ಹೊಂದಿದೆ. ದೇಶದ ಭದ್ರತೆ, ಸುರಕ್ಷತೆ, ಆರ್ಥಿಕ ಸಬಲೀಕರಣ, ಶಿಕ್ಷಣ ಮತ್ತು ಸಂಸ್ಕೃತಿ ಸಂರಕ್ಷಣೆಗಾಗಿ ಸಮಾಜದ ಏಕತೆಯೇ ಪ್ರಮುಖ ಅಸ್ತçವಾಗಿದೆ ಎಂದರು.

ಇಂದಿನ ಜಾಗತಿಕ ಸವಾಲುಗಳ ನಡುವೆಯೂ ಸಮಾಜದ ಪ್ರತಿಯೊಬ್ಬರೂ ಶ್ರೇಷ್ಠ ರಾಷ್ಟ್ರ ನಿರ್ಮಾಣದ ಹೊಣೆ ಹೊತ್ತು ದುಡಿಯುವ ಸಂಕಲ್ಪ ಮಾಡಬೇಕು. ಸಾಮಾಜಿಕ ಕಾರ್ಯ, ಶಿಕ್ಷಣ ಮತ್ತು ಸೇವಾ ಚಟುವಟಿಕೆಗಳ ಮೂಲಕ ಏಕತೆ ಗಟ್ಟಿಗೊಳಿಸಲು ಮುಂದಾಗಬೇಕು. ಇದು ಮಹಾತ್ಮ ಬಸವಣ್ಣನವರ ಕರ್ಮಭೂಮಿ. ಅವರು ಕಂಡ ಸಮ ಸಮಾಜದ ನಿರ್ಮಾಣಕ್ಕೆ ನಾವೆಲ್ಲರೂ ದುಡಿಯೋಣ ಎಂದು ಕರೆ ನೀಡಿದರು.

ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ ಮಾತನಾಡಿ, ನಮ್ಮ ಸಂಸ್ಕೃತಿ, ಪರಂಪರೆಗೆ ಕುತ್ತು ತರುವ ಮೂಲಕ ಸಮಾಜದ ವಿಘಟನೆಗೆ ಕೆಲವರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಧರ್ಮ ವಿರೋಧಿಗಳು ಅಪಪ್ರಚಾರ ಮಾಡಿ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸಮಾಜ ಎಚ್ಚರ ವಹಿಸುವ ಅಗತ್ಯವಿದೆ. ನಮ್ಮ ವಿಚಾರ, ಚಿಂತನೆ, ಕೆಲಸ ಕಾರ್ಯಗಳು ರಾಷ್ಟç, ಧರ್ಮದ ಪರವಾಗಿ ಇರಬೇಕು. ಈ ನಿಟ್ಟಿನಲ್ಲಿ ಪರಿಷತ್ ಅನೇಕ ಕಾರ್ಯಗಳು ಮಾಡುತ್ತಿದೆ ಎಂದರು.

ಶ್ರೀ ಘನಲಿಂಗ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಹಿಂದುತ್ವ ಉಳಿಸಿ, ಬೆಳೆಸುವ ದೊಡ್ಡ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಸಂಘಟಿತ ಹಿಂದು ಸಮಾಜದ ಮೂಲಕ ಸದೃಢ ಭಾರತ ನಿರ್ಮಾಣಕ್ಕಾಗಿ ವಿಶ್ವ ಹಿಂದು ಪರಿಷತ್ ಶ್ರಮಿಸುತ್ತಿದೆ. ಸಮಾಜದ ಪ್ರತಿಯೊಬ್ಬರೂ ಪರಿಷತ್ ಕಾರ್ಯಕ್ಕೆ ಕೈಜೋಡಿಸಿ ಬೆನ್ನೆಲುಬಾಗಿ ನಿಲ್ಲುವ ಅಗತ್ಯವಿದೆ ಎಂದರು.

ವಿಎಚ್‌ಪಿ ಪ್ರಾಂತ ಉಪಾಧ್ಯಕ್ಷ ಗಂಗಾಧರ ಹೆಗಡೆ, ಕೇಂದ್ರೀಯ ಸಹ ಕಾರ್ಯದರ್ಶಿ ಕೇಶವರಾಜು, ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ಮಾತನಾಡಿದರು. ಪ್ರಮುಖರಾದ ಸುನೀಲ ಭೈರವಾಡಗಿ, ಸತೀಶ ನೌಬಾದೆ, ರಮೇಶ ಕುಲಕರ್ಣಿ, ಭೀಮಣ್ಣ ಸೋರಳ್ಳಿ ಆಣದೂರ, ಬಸವರಾಜ ಯದಲಾಪುರೆ ಇತರರಿದ್ದರು. ವಿಎಚ್‌ಪಿ ಜಿಲ್ಲಾ ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ ಸ್ವಾಗತಿಸಿದರು.

ಹಿಂದು ಸಮಾಜದ ಸಂಘಟನೆ ಬಲಪಡಿಸುವುದು, ಹಿಂದು ಸಮಾಜದ ಹಿತ ಕಾಪಾಡುವುದು, ರಾಷ್ಟçಪರ ಚಟವಟಿಕೆ ನಿರಂತರ ನಡೆಸಲು ಪರಿಷತ್ ಕೆಲಸ ಮಾಡುತ್ತಿದೆ. ಯುವಕರು ಸಮಾಜ ಸೇವೆ, ಸಂಸ್ಕೃತಿಯ ಸಂರಕ್ಷಣೆ ಮತ್ತು ರಾಷ್ಟç ನಿರ್ಮಾಣದಲ್ಲಿ ಮುಂದಾಳತ್ವ ವಹಿಸಲು ಇದು ಸಕಾಲವಾಗಿದೆ. ಸಂಘಟಿತ ಹಿಂದು ಸಮಾಜವೇ ವಿಶ್ವ ಗುರು ಭಾರತದ ಕನಸು ನನಸು ಮಾಡಲು ಸಾಧ್ಯ.

| ಅಲೋಕಕುಮಾರ ವಿಶ್ವ ಹಿಂದು ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ

ಮೊದಲ ಬಾರಿ ಬೀದರ್ ಜಿಲ್ಲೆಯಲ್ಲಿ ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯಕಾರಿಣಿ ಸಭೆ ಅಚ್ಚುಕಟ್ಟಾಗಿ ಸಂಘಟಿಸಲಾಗಿದೆ. ಪರಿಷತ್ ಚಟವಟಿಕೆಗಳ ವಿಸ್ತರಣೆ, ಸಮಾಜ ಸೇವಾ ಕಾರ್ಯಗಳಿಗೆ ಇನ್ನಷ್ಟು ವೇಗ ನೀಡುವುದು ಹಾಗೂ ಸಮಾಜ ಸಂಘಟನೆ ನಿಟ್ಟಿನಲ್ಲಿ ಚಿಂತನ-ಮಂಥನ ಮಾಡಲಾಗಿದೆ. ಭಾನುವಾರ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕಕುಮಾರ ಅವರು ಗಣ್ಯರೊಂದಿಗೆ ಸಂವಾದ ನಡೆಸಲಿದ್ದು, ಬಳಿಕ ಬೈಠಕ್ ಕೊನೆಗೊಳ್ಳಲಿದೆ.

| ವೀರಶೆಟ್ಟಿ ಖ್ಯಾಮಾ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ