ಭಾಲ್ಕಿಯ ಚನ್ನಬಸವಾಶ್ರಮ ಪರಿಸರದಲ್ಲಿ ಆಯೋಜಿಸಿದ್ದ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಉದ್ಘಾಟಿಸಿದರು. ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಶಿವಾನಂದ ಸ್ವಾಮೀಜಿ, ಸಂಜುಕುಮಾರ ಜುಮ್ಮಾ, ಶರಣಪ್ಪ ಬಿರಾದಾರ್, ವಿಶ್ವನಾಥಪ್ಪ ಬಿರಾದಾರ್, ಶಶಿಕಲಾ ಅಶೋಕ ಇದ್ದರು. 
ಜಿಲ್ಲೆ

ಸಮೃದ್ಧ ಬದುಕಿಗೆ ಬಸವತತ್ವ ಪೂರಕ

ಭಾಲ್ಕಿ: ಮನುಷ್ಯನ ಸಮೃದ್ಧ ಬದುಕಿಗೆ ಬಸವತತ್ವ ಪೂರಕ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.

ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಶತಾಯುಷಿ ಡಾ.ಚನ್ನಬಸವ ಪಟ್ಟದ್ದೇವರ ೧೩೫ನೇ ಜಯಂತ್ಯುತ್ಸವ ನಿಮಿತ್ತ ಶನಿವಾರ ಆಯೋಜಿಸಿದ್ದ ಜೀವನ ದರ್ಶನ ಪ್ರವಚನ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪಟ್ಟದ್ದೇವರು ಗುರುಪರಂಪರೆ ಮಠವನ್ನು ಮೀರಿ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಅಪ್ಪಿಕೊಂಡು ಅಕ್ಷರಶಃ ಅದರಂತೆ ಬದುಕು ಸಾಗಿಸಿದರು. ಮನುಷ್ಯನ ಎಲ್ಲ ಕಷ್ಟ, ಸಮಸ್ಯೆ, ನೋವು, ನಲಿವುಗಳಿಗೆ ಬಸವತತ್ವದಲ್ಲಿ ಪರಿಹಾರವಿದೆ. ಪ್ರತಿಯೊಬ್ಬರೂ ತಮ್ಮ ಸಮೃದ್ಧ ಬದುಕಿಗಾಗಿ ಬಸವ ಮಾರ್ಗ ಅನುಸರಿಸಬೇಕು ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಶತಾಯುಷಿ ಡಾ.ಚನ್ನಬಸವ ಪಟ್ಟದ್ದೇವರು ಈ ಭಾಗದ ನಡೆದಾಡುವ ದೇವರಾಗಿ ಮನುಕುಲದ ಒಳಿತಿಗೆ ಅದ್ಭುತ ಕೊಡುಗೆ ನೀಡಿದ್ದಾರೆ. ಯುವಶಕ್ತಿ ಅವರ ತತ್ವ ಅನುಸರಿಸಿ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರವಚನಕಾರ ಡಾ.ಸಂಜುಕುಮಾರ ಜುಮ್ಮಾ ಮಾತನಾಡಿ, ಶತಾಯುಷಿ ಡಾ.ಚನ್ನಬಸವ ಪಟ್ಟದ್ದೇವರ ಅಸಾಧಾರಣ ವ್ಯಕ್ತಿತ್ವ ಎಲ್ಲರಿಗೂ ಪ್ರೇರಣೆ ಆಗಬೇಕು. ಬಸವ ಎಂದವರಿಗೆ ಹೃದಯದಲ್ಲಿ ಸ್ಥಾನ ಕಲ್ಪಿಸಿ ರಕ್ಷಣೆ ನೀಡಿದ್ದಾರೆ. ಅಂತಹ ಮಹಾತ್ಮರ ಕುರಿತು ಮಾತನಾಡಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯವೆಂದು ಭಾವಿಸಿದ್ದೇನೆ. ತನು, ಮನ ಶುದ್ಧಿಗೆ ಪ್ರವಚನ, ಅನುಭವ ಆಲಿಸುವುದು ಅಗತ್ಯ ಎಂದು ತಿಳಿಸಿದರು.

ಶಶಿಕಲಾ ಅಶೋಕ ವಾಲೆ ಬಸವ ಗುರುವಿನ ಪೂಜೆ ನೆರವೇರಿಸಿದರು. ಚನ್ನಬಸವಾಶ್ರಮ ಸಂಚಾಲಕ ವಿಶ್ವನಾಥಪ್ಪ ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು. ಚನ್ನಬಸವ ಪಟ್ಟದ್ದೇವರ ಬ್ಯಾಂಕ್‌ನ ಉಪಾಧ್ಯಕ್ಷ ಶರಣಪ್ಪ ಬಿರಾದಾರ್ ಇತರರಿದ್ದರು. ವೀರಣ್ಣ ಕುಂಬಾರ ನಿರೂಪಣೆ ಮಾಡಿ ವಂದಿಸಿದರು.

ಶತಾಯುಷಿ ಡಾ.ಚನ್ನಬಸವ ಪಟ್ಟದ್ದೇವರ ೧೩೫ನೇ ಜಯಂತ್ಯುತ್ಸವ ಅಂಗವಾಗಿ ವೃತ್ತಿಯಲ್ಲಿ ಶಿಕ್ಷಕರಾಗಿರುವ ಡಾ.ಸಂಜುಕುಮಾರ ಜುಮ್ಮಾ ಬಸವ ತತ್ವದ ಬಗ್ಗೆ ಸಾಕಷ್ಟು ಕೃಷಿ ಮಾಡಿದ್ದಾರೆ. ಅಂತವರು ಒಂದು ವಾರ ಜೀವನ ದರ್ಶನ ಪ್ರವಚನದ ಮೂಲಕ ಜ್ಞಾನ ಧಾರೆಯೆರೆಯಲ್ಲಿದ್ದಾರೆ. ಎಲ್ಲ ಸದ್ಭಕ್ತರು ಸಕಾಲಕ್ಕೆ ಆಗಮಿಸಿ ಆಲಿಸಬೇಕು.

| ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ