ಕಾರವಾರ: ಪ್ರವಾಸಿಗನನ್ನು ಹೊತ್ತ ಹಾರಾಡುತ್ತಿದ್ದ ಪ್ಯಾರಾ ಗ್ಲೈಡರ್ ಒಂದು ಪೈಲಟ್ನ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದು, ನೌಕಾಸೇನೆ ಕ್ಯಾಪ್ಟನ್ ಮೃತಪಟ್ಟ ಘಟನೆ ಶುಕ್ರವಾರ ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿ ನಡೆದಿದೆ.
ಆಂಧ್ರ ಮೂಲದ ಇಲ್ಲಿನ ಕದಂಬ ನೌಕಾನೆಲೆಯ ಕ್ಯಾಪ್ಟನ್ ಬಿ.ಎಸ್.ಮಧುಸೂದನ ರೆಡ್ಡಿ (56) ಮೃತಪಟ್ಟವರು. ಬೆಂಗಳೂರಿನಲ್ಲಿ ನೆಲೆಸಿರುವ ತಮ್ಮ ಕುಟುಂಬದ ಸದಸ್ಯರ ಜತೆ ಅವರು ವಿಹಾರಕ್ಕೆ ಕಡಲ ತೀರಕ್ಕೆ ಬಂದಿದ್ದರು. ಅವರ ಕುಟುಂಬದವರು ಗ್ಲೈಡರ್ನಲ್ಲಿ ಹಾರಿದ ನಂತರ ಕೊನೆಗೆ ಮಧುಸೂದನ ಏರಿದ್ದರು.
ಗಾಳಿಯ ರಭಸಕ್ಕೆ ಪ್ಯಾರಾಗ್ಲೈಡರ್ ನಿಯಂತ್ರಣ ತಪ್ಪಿ ತೀರದಿಂದ ಸುಮಾರು 500 ಮೀಟರ್ ದೂರದಲ್ಲಿ ಸಮುದ್ರಕ್ಕೆ ಬಿದ್ದಿತ್ತು. ಸ್ಥಳದಲ್ಲೇ ಇದ್ದ ಬೀಚ್ ಜೀವ ರಕ್ಷಕ ನೌಕರರಾದ ಚಂದನ ಜೋಶಿ, ಸುರೇಂದ್ರ ರೇಡ್ಕರ್ ಹಾಗೂ ಸ್ಥಳೀಯ ಮೀನುಗಾರರು ಧಾವಿಸಿ ಪೈಲಟ್ ವಿದ್ಯಾಧರ ವೈದ್ಯ ಅವರನ್ನು ದಡಕ್ಕೆ ಎಳೆ ತಂದಿದ್ದರು. ಆದರೆ, ಮಧುಸೂದನ ಅವರು ಪ್ಯಾರಾಗ್ಲೈಡರ್ ಹಗ್ಗ ಸುತ್ತಿಕೊಂಡು ನೀರಿನ ಒಳಗೆ ಸಿಲುಕಿಕೊಂಡಿದ್ದರು. ಇದರಿಂದ ಅವರನ್ನು ತಕ್ಷಣ ರಕ್ಷಿಸಲು ಸಾಧ್ಯವಾಗಿಲ್ಲ. ನಂತರ ಇಡೀ ಗ್ಲೈಡರನ್ನು ದಡಕ್ಕೆ ಎಳೆದು ತಂದು ಮಧುಸೂದನ ಅವರನ್ನು ಯಂತ್ರದಿಂದ ಬಿಡಿಸಲಾಯಿತು. ಅಷ್ಟು ಹೊತ್ತಿಗಾಗಲೇ ಅವರು ಸಂಪೂರ್ಣ ಅಸ್ವಸ್ಥರಾಗಿದ್ದರು. ನಗರದ ನಡುವೆಯೇ ಘಟನೆ ನಡೆದರೂ ಆಂಬುಲೆನ್ಸ್ ಬರಲು ವಿಳಂಬವಾದ ಹಿನ್ನೆಲೆಯಲ್ಲಿ ಶಹರ ಠಾಣೆ ಪಿಎಸ್ಐ ಸಂತೋಷ ಅವರು ತಮ್ಮ ವಾಹನದಲ್ಲೇ ಮಧುಸೂದನ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ, ಅಷ್ಟು ಹೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದರು.
ಪೈಲಟ್ ವಿದ್ಯಾಧರ ವೈದ್ಯ ಅಸ್ವಸ್ಥರಾಗಿದ್ದು, ಕ್ರಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀರದಲ್ಲಿ ವಿಹಾರಕ್ಕೆ ಬಂದಿದ್ದ ಸಾವಿರಾರು ಜನರು ಘಟನೆಗೆ ಸಾಕ್ಷಿಯಾದರು. ಸ್ಥಳದಲ್ಲಿ ಮಧುಸೂದನ ಅವರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾಧರ ವೈದ್ಯ ಸಂಪೂರ್ಣ ತರಬೇತಿಹೊಂದಿದ ಪ್ಯಾರಾಗ್ಲೈಡರ್ ಪೈಲಟ್ ಆಗಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಅವರು ಕಾರವಾರಕ್ಕೆ ಬರುವ ಸಾವಿರಾರು ಪ್ರವಾಸಿಗರನ್ನು ಪ್ಯಾರಾಗ್ಲೈಡರ್ನಲ್ಲಿ ಹಾರಿಸಿದ್ದಾರೆ. ಇದೇ ಮೊದಲ ಬಾರಿಗೆ ಅವಘಡ ಸಂಭವಿಸಿದೆ.