ಬಳ್ಳಾರಿ : ಜನಸಂಖ್ಯಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಯೋಜನೆಗಳ ಜತೆಗೆ ಜನ ಸಮುದಾಯವು ಸಕ್ರಿಯವಾಗಿ ಭಾಗವಹಿಸಿದ್ದಲ್ಲಿ ಮಾತ್ರ ಜನಸಂಖ್ಯೆಯನ್ನು ನಿಯಂತ್ರಣ ಮಾಡಲು ಸಾಧ್ಯ ಎಂದು ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.
ನಗರದ ಜಿಲ್ಲಾಸ್ಪತ್ರೆಯ ಡಿಎನ್‌ಬಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಟಾನ ವಿಭಾಗ, ಜಿಲ್ಲಾಸ್ಪತ್ರೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಗುರುವಾರ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ದಿನ ದೇಶದಾದ್ಯಂತ ನಾವು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಜನಸಂಖ್ಯೆ ನಿಯಂತ್ರಣದ ಜಾಗೃತಿಗೋಸ್ಕರ ಆಚರಿಸುತ್ತಿದ್ದೇವೆ. 1987 ರಲ್ಲಿ ವಿಶ್ವದ ಜನಸಂಖ್ಯೆ 500 ಕೋಟಿ ದಾಟಿದ ಹಿನ್ನಲೆಯಲ್ಲಿ ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯೆ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ಅಧ್ಯಕ್ಷ ಮುಂಡರಗಿ ನಾಗರಾಜ್ ಮಾತನಾಡಿ, ಹೆಚ್ಚುತ್ತಿರುವ ಜನಸಂಖ್ಯೆಯು ದೇಶದ ಸಾಮಾಜಿಕ, ಆರ್ಥಿಕ ಅಭಿವೃದ್ದಿಯಲ್ಲಿ ಅನೇಕ ತೊಂದರೆಗಳನ್ನು ಉಂಟುಮಾಡುತ್ತದೆ. ನಮ್ಮ ಮುಂದೆ ಜನಸಂಖ್ಯಾ ಸ್ಥಿರತೆಯನ್ನು ಕಾಯ್ದುಕೊಳ್ಳುವ ಬಹುದೊಡ್ಡ ಜವಾಬ್ದಾರಿಯಿದೆ ಎಂದು ಅಭಿಪ್ರಾಯ ಪಟ್ಟರು.
ಡಿಎಚ್‌ಒ ಡಾ.ವೈ.ರಮೇಶಬಾಬು ಮಾತನಾಡಿದರು. ಆರೋಗ್ಯ ಇಲಾಖೆಯ ಸಾಧಕ ವೈದ್ಯರು ಮತ್ತು ಸಿಬ್ಬಂದಿಯವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಜನಸಂಖ್ಯಾ ನಿಯಂತ್ರಣದ ಜಾಗೃತಿ ಜಾಥ ನಡೆಯಿತು.
ಪ್ರಮುಖರಾದ ರಾಷ್ಟ್ರೀಯ ಬಾಲ್ಯಸ್ವಾಸ್ಥ್ಯ ಕಾರ್ಯಕ್ರಮದ ಉಪನಿರ್ದೇಶಕಿ ಡಾ.ವೀಣಾ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ, ಆರೋಗ್ಯ ಶಿಕ್ಷಣ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಪದ್ಮ ರೋಜ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ., ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ಇದ್ದರು.