ಜಿಲ್ಲೆ

ಸಮುದಾಯದ ಸಂಕಟ ಬಿಂಬಿಸುವ ಕೌದಿ

ಅಶೋಕ್ ಕುಮಾರ್ ಎನ್

ಹೂವಿನಹಡಗಲಿ: ನಾಟಕಗಳು ಬದುಕಿನ ಅನೇಕ ಸಂಕಟ ಹಾಗೂ ಸಮಾಜದಲ್ಲಿನ ತಲ್ಲಣಗಳನ್ನು ರಂಗದ ಮೇಲೆ ತೋರಿಸುತ್ತವೆ ಎಂದು ಲೇಖಕ ಗಣೇಶ ಅಮೀನಗಡ ಹೇಳಿದರು.

ಪಟ್ಟಣದ ಶ್ರೀಮತಿ ರುದ್ರಾಂಬ ಎಂ.ಪಿ. ಪ್ರಕಾಶ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಿಂದ ಆಯೋಜಿಸಿದ್ದ ‘ಕೌದಿ’ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಉತ್ತರ ಕರ್ನಾಟಕ ಅನೇಕ ಸಂಸ್ಕೃತಿಗಳನ್ನು ತನ್ನಲ್ಲಿರಿಸಿಕೊಂಡಿದೆ. ನಾಟಕ ಪರಂಪರೆ ಇಲ್ಲಿನ ವಿಶಿಷ್ಟ ಕಲೆಗಳಲ್ಲಿ ಒಂದಾಗಿದೆ. ಅಲೆಮಾರಿಗಳ ಬದುಕು-ಬವಣೆ ಕುರಿತು ರಚಿಸಲಾದ ‘ಕೌದಿ’ ಏಕ ವ್ಯಕ್ತಿ ಪ್ರದರ್ಶನ ನಾಟಕ ಉತ್ತರ ಕರ್ನಾಟಕದ ಸೌಹಾರ್ದ, ಸಾಮರಸ್ಯ ಹಾಗೂ ಸಮುದಾಯದ ಸಂಕಟವನ್ನೂ ಪ್ರತಿಬಿಂಬಿಸುತ್ತದೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸತೀಶ್ ಪಾಟೀಲ್ ಮಾತನಾಡಿ, ಜಾತಿಗಣತಿ ಹಾಗೂ ಮೀಸಲಾತಿ ಕುರಿತು ಚರ್ಚೆ ನಡೆಯುತ್ತಿರುವ ಈ ಹೊತ್ತಲ್ಲಿ ಯಾವುದೇ ನೆಲೆಯಿಲ್ಲದೆ ಬದುಕುತ್ತಿರುವ ಅಲೆಮಾರಿಗಳ ಬದುಕಿನ ಬವಣೆಯನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸುವ ಈ ನಾಟಕವನ್ನು ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಬೇಕು ಎಂದರು.

ಕಲಾವಿದೆ ಭ್ಯಾಗ್ಯಶ್ರೀ ಪಾಳ ಒಂದು ಗಂಟೆ ನಿರಂತರವಾಗಿ ಏಕವ್ಯಕ್ತಿ ಪ್ರದರ್ಶನ ನೀಡಿದರು. ನಾಟಕದ ಬೆಳಕು ಮತ್ತು ಸಂಗೀತವನ್ನು ಪದ್ಮಾ ರಾಯಚೂರು ನಿರ್ವಹಿಸಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕ ಕೊಟ್ರೇಶ್ ಪಿ., ಸಾಂಸ್ಕೃತಿಕ ವಿಭಾಗದ ಸಂಚಾಲಕ ವೆಂಕಟೇಶ್ ಎಚ್, ಪ್ರಾಧ್ಯಾಪಕ ಡಾ.ಸುರೇಶ್ ಬೂದನೂರು, ಪ್ರಾಧ್ಯಾಪಕಿಯರಾದ ಊಮಾ ಜಿ.ಟಿ., ಸುನಿತಾ ದೇವಿ ಇತರರಿದ್ದರು.