ರಾಮನಗರ : ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಪಕ್ಷ ಒಡೆಯುವಂತೆ ಧರ್ಮವನ್ನು ಒಡೆಯುತ್ತಿದ್ದಾರೆ. ಜಾತಿಗಣತಿಯನ್ನು ಎಲ್ಲರೂ ಬೇಡ ಎನ್ನುತ್ತಿದ್ದರೂ, ರಾಜ್ಯದ ಮುಖ್ಯಮಂತ್ರಿ ಮಾಡೇ ತೀರುತ್ತೇನೆ ಎನ್ನುತ್ತಿರುವುದು ಯಾಕೆಂದು ತಿಳಿಯುತ್ತಿಲ್ಲ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ವಿಶ್ವ ವೀರಶೈವ ಲಿಂಗಾಯತ ಒಕ್ಕೂಟ ರಾಜ್ಯಾಧ್ಯಕ್ಷ ಜ್ಯೋತಿ ಪ್ರಕಾಶ್ ಮಿರ್ಜಿ ತಿಳಿಸಿದರು.
ನಗರದ ಅರಳೇಪೇಟೆ ಬಸವೇಶ್ವರ ಪ್ರಾರ್ಥನಾ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಮಹಾಸಂಗಮ ಮತ್ತು ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಜಯಂತಿ ಮತ್ತು ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.
ಸಮುದಾಯದ ಒಗ್ಗಟ್ಟು, ಅಭಿವೃದ್ಧಿಗೆ ಪೂರಕವಾಗಲಿದೆ. ನಾವು ಒಗ್ಗಟ್ಟು ಪ್ರದರ್ಶನ ಮಾಡಿದರೆ ಸರ್ಕಾರವೂ ನಮ್ಮ ಮಾತು ಕೇಳುತ್ತದೆ. ಮಾನವ ಧರ್ಮಕ್ಕೆ ಜಯವಾಗಲಿ ಎಂದ ರೇಣುಕಾಚಾರ್ಯರು, ಇವ ನಮ್ಮವ ಎಂಬ ಬಸವಣ್ಣನವರ ತತ್ವವನ್ನು ಅಳವಡಿಸಿಕೊಂಡು ನಡೆಯೋಣ ಎಂದರು.
ಭಗವಂತನನ್ನು ಭಕ್ತನ ಕೈಯಲ್ಲಿಡುವ ಧರ್ಮವಿದ್ದರೆ ಅದು ವೀರಶೈವ ಧರ್ಮ ಮಾತ್ರ. ಮಕ್ಕಳಿಗೆ ದೀಕ್ಷೆ ಕೊಡಿಸುವ ಜತೆಗೆ ಧರ್ಮದ ಬಗ್ಗೆ ತಿಳಿವಳಿಕೆ ಮೂಡಿಸಬೇಕಿದೆ. ಎಲ್ಲರನ್ನೂ ಒಗ್ಗೂಡಿಸುವುದೇ ಧರ್ಮ. ಜಗತ್ತಿನ ಎಲ್ಲ ಸಮಾಜವರೂ ದೇವರನ್ನು ನಂಬುತ್ತಾರೆ. ಪ್ರತಿ ಧರ್ಮದವರೂ ತಮಗೆ ತೊಂದರೆಯಾದಾಗ ದೇವರ ಮೊರೆ ಹೋಗುತ್ತಾರೆ. ಧರ್ಮವನ್ನು ಉಳಿಸಿ ಬೆಳೆಸಬೇಕಿದೆ. ನಮ್ಮ ಮಕ್ಕಳಿಗೆ ಧರ್ಮದ ಬಗ್ಗೆ ಅರಿವು ಮೂಡಿಸಿ, ಧರ್ಮದ ಹಾದಿಯಲ್ಲಿ ನಡೆಯುವುದನ್ನು ತಿಳಿಸಬೇಕು. ನಮ್ಮಲ್ಲಿ ಐಕ್ಯತೆ ಇರಲಿ, ಕೆಲವರು ವೈಯಕ್ತಿಕ ಲಾಭಕ್ಕೆ ಸಮಾಜ ಹೊಡೆಯುವ ಕೆಲಸ ಮಾಡುತ್ತಾರೆ. ಆಚರಣೆಗಳು ಮನೆಯೊಳಗಿರಲಿ, ಒಳಜಗಳವನ್ನು ಬೀದಿಗೆ ತರುವುದು ಬೇಡ ಎಂದರು.
ವನಸಿರಿ ಶರಣಾಶ್ರಮದ ಸಂಸ್ಥಾಪಕ ಡಾ.ಶಂಕರ ಆರಾಧ್ಯ ಗೂರೂಜಿ ಮಾತನಾಡಿ, ವೀರಶೈವ ಲಿಂಗಾಯತ ಧರ್ಮದವರು ಒಗ್ಗೂಡಬೇಕು. ಮತ್ತಷ್ಟು ಬಲಿಷ್ಠವಾಗಿ ಧರ್ಮಾನುಷ್ಠಾನ ಮಾಡಬೇಕು. ನಮ್ಮ ಧರ್ಮವನ್ನು ನಾವು ಬಿಡುವುದು ಬೇಡ. ಬೇರೆ ಧರ್ಮವನ್ನು ಹೀಗಳೆಯುವುದು ಬೇಡ. ನಮ್ಮ ಧರ್ಮವನ್ನು ಬಲಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡೋಣ. ಇಷ್ಟಲಿಂಗ ಪೂಜೆ ಎಲ್ಲ ಧರ್ಮದ ಹಿತಕ್ಕಾಗಿ ಮಾಡಲಾಗುತ್ತಿದೆ ಎಂದರು.
ಎಲ್ಲ ಧರ್ಮಗಳು ಸಂತಸವಾಗಿರಲಿ ಎಂಬುದೇ ವೀರಶೈವ ಲಿಂಗಾಯತ ಧರ್ಮದ ಮೂಲ ಆಶಯವಾಗಿದೆ. ವೀರಶೈವ ಲಿಂಗಾಯತ ಧರ್ಮಾಚರಣೆಗಳು ಕಡಿಮೆಯಾಗಿದ್ದೇ ಎಲ್ಲ ಧರ್ಮದಲ್ಲಿ ಸಮಸ್ಯೆಗಳು ಹೆಚ್ಚಾಗಲು ಕಾರಣವಾಗಿದೆ. ನಮ್ಮ ಸ್ಥಳೀಯ ಔಷಧೀಯ ಗುಣಗಳ ವಸ್ತುಗಳನ್ನು ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ತಿಳಿಸಿದರು.
ವಿಶ್ವ ವೀರಶೈವ ಲಿಂಗಾಯತ ಒಕ್ಕೂಟ ಪದಾಧಿಕಾರಿಗಳ ಆಯ್ಕೆ : ಜಿಲ್ಲಾಧ್ಯಕ್ಷರಾಗಿ ಪೋಲೀಸ್ ರುದ್ರೇಶ್, ಜಿಲ್ಲಾ ಗೌರವಾಧ್ಯಕ್ಷರಾಗಿ ಮಹದೇವಯ್ಯ, ಉಪಾಧ್ಯಕ್ಷರಾಗಿ ಕೊಡಿಯಾಲ ಶಾಂತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಪುಷ್ಪಲತಾ, ರಾಮನಗರ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸುಧಾರಾಣಿ ಆಯ್ಕೆಯಾಗಿದ್ದಾರೆ ಎಂದು ಒಕ್ಕೂಟ ರಾಜ್ಯಾಧ್ಯಕ್ಷ ಜ್ಯೋತಿ ಪ್ರಕಾಶ್ ಮಿರ್ಜಿ ಸಭೆಯಲ್ಲಿ ಪ್ರಕಟಿಸಿದರು.
ಮುಖಂಡರಾದ ವಿದ್ವಾನ್ ಚಂದ್ರಶೇಖರಯ್ಯ, ನಿವೃತ್ತ ಪ್ರಾಂಶುಪಾಲ ಡಾ. ಮಹದೇವಯ್ಯ, ಪುಷ್ಪಲತಾ, ರಾಜಶೇಖರ್, ಪೂಜಾ ಸ್ವೀಟ್ಸ್ ಕುಮಾರ್, ಶಿವಲಿಂಗಪ್ರಸಾದ್, ಸುಧಾರಾಣಿ, ಸುನೀತಾ, ರೇಣುಕಮ್ಮ, ದಿವ್ಯಾ, ಉಮಾ, ಮಹದೇವಶಾಸ್ತ್ರಿ, ಸಿದ್ದಲಿಂಗಮೂರ್ತಿ, ಮೃತ್ಯುಂಜಯ ಇತರರು ಇದ್ದರು.
ಜಿಲ್ಲೆಯಲ್ಲಿ ವೀರಶೈವ ಸಮಾಜದ ಸಂಘಟನೆಗೆ ಒತ್ತು ನೀಡಲಾಗುತ್ತದೆ. ಶೀಘ್ರದಲ್ಲಿಯೇ ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ನೂತನ ಜಿಲ್ಲಾ ಮತ್ತು ಎಲ್ಲ ತಾಲೂಕು ಘಟಕಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗುತ್ತದೆ. ಯುವ ಘಟಕ ಹಾಗೂ ಮಹಿಳಾ ಘಟಕ ಒಳಗೊಂಡಂತೆ ಐದು ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಶೀಘ್ರದಲ್ಲಿಯೇ ರಾಮನಗರ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಸಮ್ಮೇಳನ ಮಾಡಲಾಗುತ್ತದೆ. ಪೊಲೀಸ್ ರುದ್ರೇಶ್, ವೀರಶೈವ ಲಿಂಗಾಯತ ಒಕ್ಕೂಟದ ಜಿಲ್ಲಾಧ್ಯಕ್ಷ