ಜಿಲ್ಲೆ

ಸಮುದಾಯದ ಅಭಿವೃದ್ಧಿಯೇ ಶ್ರೀ ಕ್ಷೇತ್ರದ ಧ್ಯೇಯ

ಬೆಟ್ಟದಪುರ: ಗ್ರಾಮಗಳ ಮತ್ತು ಸಮುದಾಯದ ಅಭಿವೃದ್ಧಿಯೇ ಶ್ರೀ ಕ್ಷೇತ್ರದ ಧ್ಯೇಯವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ತಿಳಿಸಿದರು.

ಬೆಟ್ಟದಪುರ ಸಮೀಪದ ಕೋಮಲಾಪುರ ಗ್ರಾಮದಲ್ಲಿ ಇತ್ತೀಚೆಗೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ಶ್ರೀ ಬಸವೇಶ್ವರ ದೇವರಿಗೆ ಪಂಚಾಮೃತ ಅಭಿಷೇಕ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಥೆ ವತಿಯಿಂದ ಒಗ್ಗಟಿನ ಮೂಲಕ ಗ್ರಾಮಗಳ ಮತ್ತು ಜನ ಸಮುದಾಯದ ಅಭಿವೃದ್ಧಿ ಬಗ್ಗೆ ಸದಾ ಕಾಳಜಿ ವಹಿಸಿ ಸಾರ್ವಜನಿಕರಿಗೆ ಉಪಯುಕ್ತವಾದ ಯೋಜನೆಗಳನ್ನು ಜಾರಿಗೊಳಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ವಸತಿ ನಿರ್ಮಾಣ, ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ ನೀಡುತ್ತಿದ್ದೆ. ಪ್ರೀತಿ, ಸಾಮರಸ್ಯ ಮೂಡಿಸಲು ಪ್ರತಿಯೊಬ್ಬರಲ್ಲಿಯೂ ಅರಿವು ಮೂಡಿಸುತ್ತಿದ್ದಾರೆ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ರೂಪಿಸಿ ಒಗ್ಗಟ್ಟಿನಲ್ಲಿ ಜೀವಿಸಬೇಕು ಎಂಬ ಸಂದೇಶ ನೀಡುತ್ತಿದ್ದೇವೆ ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ಸ್ವಾಮೇಗೌಡ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಾಡಿನಾದ್ಯಂತ ಅನೇಕ ಸಾಮಾಜಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಇದರ ಜತೆ ನೊಂದವರ ಪರವಾಗಿ ಬಹಳಷ್ಟು ಜನರಿಗೆ ಬಾಳಿಗೆ ಬೆಳಕಾಗಿದ್ದಾರೆ. ಇದಕ್ಕೆ ಎಲ್ಲರ ಪರವಾಗಿ ನಾನು ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇಂತಹ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.

ತಾಲೂಕು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸಂಯೋಜಕ ರವಿಕುಮಾರ್, ಗ್ರಾಪಂ ಅಧ್ಯಕ್ಷ ಮಂಜುನಾಥ್, ಶ್ರೀರಾಮ ಪ್ರೌಢಶಾಲೆಯ ಅಧ್ಯಕ್ಷ ಪ್ರೇಮ್ ಕುಮಾರ್, ಖಜಾಂಚಿ ರಾಮಚಂದ್ರ, ಮುಖ್ಯಶಿಕ್ಷಕ ಮುತ್ತುರಾಜ್, ಒಕ್ಕೂಟದ ಗೀತಾ, ಲಕ್ಷ್ಮೀ, ಮುಖಂಡರಾದ ಶಿವಣ್ಣಾಚಾರಿ, ವೀರಭದ್ರಗೌಡ, ಈರೇಗೌಡ ಇದ್ದರು.