ಜಿಲ್ಲೆ

ಸಮುದಾಯಗಳ ಮನುಕುಲ ಶಾಸ್ತ್ರ ಅಧ್ಯಯನ ಸ್ಥಗಿತ

ಮೈಸೂರು: ಪ್ರಸ್ತಕ ದಿನಮಾನದಲ್ಲಿ ವಿವಿಧ ಸಮುದಾಯಗಳ ಕುರಿತು ಮನುಕುಲ ಶಾಸ್ತ್ರ ಅಧ್ಯಯನ ಆಗುತ್ತಿಲ್ಲ ಎಂದು ಸಮಾಜಶಾಸ್ತ್ರಜ್ಞೆ ಪ್ರೊ.ಆರ್.ಇಂದಿರಾ ಕಳವಳ ವ್ಯಕ್ತಪಡಿಸಿದರು.


ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಅಂಗಳ ಸಾಹಿತ್ಯ ಬಳಗದ ಸಹಯೋಗದಲ್ಲಿ ಅಭಿರುಚಿ ಪ್ರಕಾಶನದ ಕೆ.ಎಸ್.ಸುಚೇತಾ ಅವರ ‘ಬರಿ ಕಥೆಯಲ್ಲ’ ಅಗ್ರಹಾರದ ಕಥನ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ವಿವಿಧ ಸಮುದಾಯಗಳ ಕುರಿತು ಸುದೀರ್ಘ ಅಧ್ಯಯನ ನಿಂತು ಹೋಗಿದೆ. ಈ ಹಿಂದೆ ಮಾನವಶಾಸ್ತ್ರ ತಜ್ಞರು, ಸಮಾಜಶಾಸ್ತ್ರ ತಜ್ಞರು ಬರೆಯುತ್ತಿದ್ದರು. ಸಂಶೋಧನೆ ಸಹ ಮಾಡುತ್ತಿದ್ದರು. ಆದರೀಗ ಇದೆಲ್ಲ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಜನಸಮುದಾಯದಲ್ಲಿ ಒಳಗಿನ ಹಾಗೂ ಹೊರಗಿನ ಸತ್ಯಗಳೆರಡು ಇರುತ್ತವೆ. ಅದನ್ನು ಹೊರ ತೆಗೆಯಬೇಕು. ಆದರೆ, ಸಮುದಾಯದ ಒಳಗಿನವರು ಕೆಲ ಸತ್ಯವನ್ನು ಬರೆಯಲು ಆಗುವುದಿಲ್ಲ. ಹೊರಗಿನವರು ಅದಕ್ಕೆ ನ್ಯಾಯ ಕಲ್ಪಿಸಿಕೊಡಲು ಆಗುವುದಿಲ್ಲ. ಆದರೆ, ಸುಚೇತಾ ಅವರು ತಮ್ಮ ಬ್ರಾಹ್ಮಣ ಸಮುದಾಯದಲ್ಲಿರುವ ಅನೇಕ ಸಂಗತಿಗಳು, ಅನುಭವವನ್ನು ಮುಕ್ತವಾಗಿ ಕೃತಿಯಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಸಾಮಾಜಿಕ, ವೈಜ್ಞಾನಿಕ ಅಧ್ಯಯನ ಮಾದರಿಯೂ ಇದರಲ್ಲಿ ಅಡಕವಾಗಿದೆ ಎಂದರು.


ಹಿರಿಯ ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಮಾತನಾಡಿ, ವ್ಯಕ್ತಿ ಮೌಲ್ಯಮಾಪನವನ್ನು ಆತನ ಹುಟ್ಟಿದ ಸಮುದಾಯದಿಂದ ಮಾಡುವುದು ತಪ್ಪು. ಅದನ್ನು ಬಹಳ ಸ್ಪಷ್ಟ ಮತ್ತು ನಿಖರವಾಗಿ ಈ ಕೃತಿಯಲ್ಲಿ ಪ್ರತಿಪಾದಿಸಲಾಗಿದೆ ಎಂದರು.


ಅನುಭವ ಬರೀ ಮಾತಿನ ರೂಪದಲ್ಲಿ ಇರಬಾರದು. ಅದು ಅಕ್ಷರ ರೂಪಕ್ಕಿಳಿಸಬೇಕು. ಇಲ್ಲವಾದರೆ ಅದು ಅನುಭವವಾಗಿಯೇ ಉಳಿದುಬಿಡುತ್ತದೆ. ಅನುಭವ ಜ್ಞಾನವಾಗುವುದೇ ಅಕ್ಷರ ರೂಪದಿಂದ. ಅದು ಮುಂದಿನ ತಲೆಮಾರಿಗೆ ವರ್ಗಾವಣೆ ಆಗುತ್ತದೆ. ಮಹಿಳಾ ಅನುಭವವನ್ನು ಕೆ.ಎಸ್.ಸುಚೇತಾ ಅವರು ತಮ್ಮ ಕೃತಿಯಲ್ಲಿ ಕಟ್ಟಿಕೊಂಡಿದ್ದಾರೆ ಎಂದರು.


ಈ ಕೃತಿ ಒಬ್ಬ ಮಹಿಳೆಯ ಕಥೆಯಲ್ಲ. ಎಲ್ಲ ಮಹಿಳೆಯರ ಕಥೆ. ಮಹಿಳಾ ಕುಲದ ಆತ್ಮಕಥನ. ಹೆಣ್ಣು ಮನಸ್ಸು ಹೇಗೆ ಸುತ್ತಲಿನ ಸಮಾಜವನ್ನು ಗ್ರಹಿಸುತ್ತದೆ ಎಂಬುದರ ಒಳನೋಟ ಇದೆ. ಇಡೀ ಸಮಾಜದ ಚಿತ್ರಣ ಈ ಕೃತಿಯಲ್ಲಿದೆ ಎಂದು ವಿಶ್ಲೇಷಿಸಿದರು.
12ನೇ ಶತಮಾನದಲ್ಲೇ ಕಾಶ್ಮೀರದ ಬ್ರಾಹ್ಮಣರು ತಮ್ಮ ಪ್ರದೇಶವನ್ನು ಬಿಟ್ಟು ಹೊರಬಂದಿದ್ದಾರೆ. ಅಲ್ಲಿಂದ ಬಂದವರು ಹಾಸನ, ಚಿಕ್ಕಮಗಳೂರು ಪ್ರದೇಶದಲ್ಲಿ ನೆಲೆಸಿದ್ದರು ಎನ್ನುವುದಕ್ಕೆ ಶಾಸನಗಳ ದಾಖಲೆ ಇದೆ. ಅಂತಹ ಸಮುದಾಯದಿಂದ ಬಂದಿರುವ ಲೇಖಕರು ಬಹಳಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ ಎಂದರು.
ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ನೀಲಗಿರಿ ತಳವಾರ, ಚಿಂತಕ ನಾ.ದಿವಾಕರ, ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ್, ಲೇಖಕಿ ಕೆ.ಎಸ್.ಸುಚೇತಾ ಪಾಲ್ಗೊಂಡಿದ್ದರು.