ಬೀದರ್: ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸಮುದಾಯ ಭವನ ಕಾಮಗಾರಿಗೆ ೨೫ ಲಕ್ಷ ಅನುದಾನ ನೀಡುವುದಾಗಿ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ ಘೋಷಿಸಿದರು.
ನೌಬಾದ್‌ನ ಯಲ್ಲಾಲಿಂಗ ಕಾಲನಿ ರೈಲ್ವೆ ಗೇಟ್ ಬಳಿ ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ಮಾತನಾಡಿದ ಅವರು, ಭವನದ ನಿವೇಶನ ಖರೀದಿಗಾಗಿ ಸಂಘದ ಕೇಂದ್ರ ಸಮಿತಿಯಿಂದ ಈಗಾಗಲೇ ೨೫ ಲಕ್ಷ ಅನುದಾನ ನೀಡಲಾಗಿದೆ. ಇದೀಗ ಕಾಮಗಾರಿಗಾಗಿ ಮತ್ತೆ ಅನುದಾನ ಒದಗಿಸುವುದಾಗಿ ಹೇಳಿದರು.
ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಂಘದ ಕಚೇರಿ ಹಾಗೂ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ. ವಿದ್ಯುತ್ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಜತೆಗೆ ಗುತ್ತಿಗೆದಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಸಂಘ ನಾನಾ ಕಾರ್ಯಯೋಜನೆಗಳನ್ನು ಹಾಕಿಕೊಂಡಿದೆ ಎಂದರು.
ನಂತರ ಪದಾಧಿಕಾರಿಗಳ ಸಭೆ ನಡೆಯಿತು. ಸಂಘದ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಆನಂದ, ಬೀದರ್ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ, ಕಲಬುರಗಿ ಜಿಲ್ಲಾಧ್ಯಕ್ಷ ಬಸವರಾಜ ಮಾಲಿಪಾಟೀಲ್, ಪ್ರಮುಖರಾದ ಗುಂಡಪ್ಪ ಕಂಟೆ, ಸಂತೋಷ ಪಾಟೀಲ್, ವಿಜಯಕುಮಾರ ಪಾಟೀಲ್, ಕಿರಣ ಹೊನ್ನಾ, ಅಶೋಕ ಕಮರಡಿ, ಪ್ರಕಾಶ ಹಲ್ಮಡಗೆ, ಶೇಖ ಗುಲಾಬ್, ಅರ್ಷದ್ ಮಹಾಗಾಂವಿ, ಸುಭಾಷ ಸಾವಳೆ, ಸೋಮನಾಥ ಟೋಕರೆ, ಮಹ್ಮದ್ ಖವಿ, ಝರೆಪ್ಪ ಬೌದ್ಧೆ, ಶೇಖ ಸಲಾವುದ್ದೀನ್, ರಾಜಕುಮಾರ ಪಾಟೀಲ್, ಶರಣಪ್ಪ ಚತುರೆ, ಕೈಲಾಸ ಘೂಳೆ, ರಾಹುಲ್ ಪಾಶಾ, ದಯಾನಂದ ಪಾಟೀಲ್, ರಶೀದ್, ಬೂದಯ್ಯ ಇತರರಿದ್ದರು.
ರೂ. ೧.೫೦ ಕೋಟಿ ಯೋಜನೆ
ವಿದ್ಯುತ್ ಗುತ್ತಿಗೆದಾರರ ಸಂಘದ ಸಮುದಾಯ ಭವನ ೧.೫೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಯೋಜನೆ ಇದ್ದು, ಇದೀಗ ಅರ್ಧದಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ತಿಳಿಸಿದರು. ಸಂಘದ ಕೇಂದ್ರ ಸಮಿತಿಯಿಂದ ನಿವೇಶನ ಖರೀದಿಗಾಗಿ ೨೫ ಲಕ್ಷ ರೂ. ನೀಡಿದ್ದು, ಮತ್ತೆ ೨೫ ಲಕ್ಷ ಕೊಡುವುದಾಗಿ ಹೇಳಿದ್ದು ಖುಷಿ ತಂದಿದೆ. ಇತರ ಅನುದಾನವನ್ನು ಜಿಲ್ಲಾ ಸಮಿತಿ ಹಾಗೂ ಪದಾಧಿಕಾರಿಗಳ ಮೂಲಕ ಕ್ರೋಡೀಕರಣ ಮಾಡಲಾಗುವುದು. ಆರು ತಿಂಗಳೊಳಗೆ ಕಾಮಗಾರಿ ಮುಗಿಸುವುದಾಗಿ ಹೇಳಿದರು.
ವಿದ್ಯುತ್ ಗುತ್ತಿಗೆದಾರರ ತಕ್ಷಣ ಬಿಲ್ ಪಾವತಿ ಸೇರಿ ಎಲ್ಲ ಬೇಡಿಕೆಗಳ ಈಡೇರಿಕೆ ಸಂಬಂಧ ನೀಡಿರುವ ಆದೇಶವನ್ನು ದಿಢೀರ್ ರದ್ದುಗೊಳಿಸಿದ್ದನ್ನು ಖಂಡಿಸಿ ಒಗ್ಗಟ್ಟಿನಿಂದ ಹೋರಾಟ ಮಾಡಿದ ಫಲವಾಗಿ ನ್ಯಾಯ ಸಿಕ್ಕಿದೆ. ಆದೇಶ ವಾಪಸ್ ಪಡೆಯುವುದಾಗಿ ಜೆಸ್ಕಾಂ ಎಂಡಿ ಹೇಳಿದ್ದಾರೆ.
| ಸಿ.ರಮೇಶ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ