ಜಿಲ್ಲೆ

ಸಮುದಾಯ ಭವನಕ್ಕೆ ಚುನಾವಣೆ ನಂತರ ನೆರವು  -ಸಂಸದ ಜಿ.ಎಂ.ಸಿದ್ದೇಶ್ವರ ಭರವಸೆ

ದಾವಣಗೆರೆ: ನಗರದ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿ ನಿರ್ಮಾಣ ಹಂತದ ವಿಠ್ಠಲ ರುಕ್ಮಿಣಿ ಸಮುದಾಯಕ್ಕೆ ಅಗತ್ಯ ಹೆಚ್ಚುವರಿ ಅನುದಾನವನ್ನು ಲೋಕಸಭೆ ಚುನಾವಣೆ ಬಳಿಕ ಒದಗಿಸಿಕೊಡುವುದಾಗಿ ಸಂಸದ ಜಿ.ಎಂ.ಸಿದ್ದೇಶ್ವರ ಭರವಸೆ ನೀಡಿದರು.

ನಗರದ ಧರ್ಮಪ್ರವರ್ತ ರಾಜನಹಳ್ಳಿ ಹನುಮಂತಪ್ಪ ಧರ್ಮಶಾಲೆಯಲ್ಲಿ ಭಾನುವಾರ ನಾಮದೇವ ಸಿಂಪಿ ಸಮಾಜದಿಂದ ಹಮ್ಮಿಕೊಂಡಿದ್ದ, ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿ ದೇವರ 98ನೇ ದಿಂಡಿ ಮಹೋತ್ಸವದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಮದೇವ ಸಿಂಪಿ ಸಮಾಜ ಮೊದಲಿನಿಂದಲೂ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದೆ. ತಂದೆ ಜಿ.ಮಲ್ಲಿಕಾರ್ಜುನಪ್ಪ ಹಾಗೂ ನನಗೆ ಈ ಕ್ಷೇತ್ರದಲ್ಲಿ ಒಟ್ಟು 7 ಬಾರಿ ಆಯ್ಕೆಯಾಗಿದ್ದರೆ ಅದರ ಹಿಂದೆ ಸಮಾಜದ ಜನರ ಆಶೀರ್ವಾದವಿದೆ ಎಂದರು.

ಸಮಾಜದ ಸಮುದಾಯ ಭವನಕ್ಕೆ ನಾನು- ನನ್ನ ತಂದೆ ಇಬ್ಬರೂ ಹೆಚ್ಚಿನ ಅನುದಾನ ನೀಡಿದ್ದೇವೆ. ಸಮಾಜದ ಬೇಡಿಕೆಯಂತೆ ಇನ್ನಷ್ಟು ನೆರವು ನೀಡಲು ಈಗ ಅನುದಾನ ಲಭ್ಯತೆ ಇಲ್ಲ. ಇನ್ನು ಮೂರು ತಿಂಗಳಲ್ಲಿ ಲೋಕಸಭೆ ಚುನಾವಣೆ ಬರಲಿದೆ. ಯಾರೇ ಗೆದ್ದರೂ ಸ್ಪಂದಿಸುವುದಾಗಿ ಹೇಳಿದರು.

ಪಂಡರಾಪುರದ ಪಾಂಡುರಂಗ ವಿಠ್ಠಲ ದೇವರ ದರ್ಶನಕ್ಕೆ ದಾವಣಗೆರೆಯಿಂದ ಪ್ರತಿ ವರ್ಷ ಭಕ್ತರು ಫಾದಯಾತ್ರೆ ತೆರಳುತ್ತಾರೆ. ಈ ಮಹಿಮೆಯ ಸ್ಥಳದ ದರ್ಶನ ಮಾಡುವುದೇ ಪುಣ್ಯ. ಈ ಹಿಂದೆಲ್ಲ ಕುದುರೆಗಳೊಂದಿಗೆ ದರ್ಶನ ಪಡೆಯುತ್ತಿದ್ದರು ಎಂದು ಸ್ಮರಿಸಿದರು.

ನಾಮದೇವ ಸಿಂಪಿ ಸಮಾಜದ ದಾವಣಗೆರೆ ಅಧ್ಯಕ್ಷ ಎಂ.ಎಸ್. ವಿಠ್ಠಲ್ ಮಾತನಾಡಿ ದಾವಣಗೆರೆಯಲ್ಲಿ ಸುಮಾರು 5 ಸಾವಿರ ಜನಸಂಖ್ಯೆಯುಳ್ಳ ನಾಮದೇವ ಸಿಂಪಿ ಸಮಾಜದಿಂದ ಪ್ರತಿ ವರ್ಷ ಮೂರು ದಿನಗಳ ಕಾಲ ಅದ್ದೂರಿ ದಿಂಡಿ ಮಹೋತ್ಸವ ಆಯೋಜಿಸಲಾಗುತ್ತಿದೆ. ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವ ಕಾರ್ಯಕ್ರಮದ ಜತೆಗೆ ಧಾರ್ಮಿಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಸುಮಾರು 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಮುದಾಯ ಭವನಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ ಅವರು 20 ಲಕ್ಷ ರೂ.ಗಳ ಅನುದಾನ ಕಲ್ಪಿಸಿದ್ದಾರೆ. ಇನ್ನೂ 1 ಕೋಟಿ ರೂ. ಅಗತ್ಯವಿದೆ ಎಂದು ಹೇಳಿದರು.

ಸಮಾಜದ ಮಕ್ಕಳಿಗೆ ಭಕ್ತಿಗೀತೆ, ನೃತ್ಯ, ವೇಷಭೂಷಣ ಹಾಗೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಸಮಾಜದ ಗೌರವಾಧ್ಯಕ್ಷ ಜ್ಞಾನದೇವ ಬೊಂಗಾಳೆ, ಪ್ರಧಾನ ಕಾರ್ಯದರ್ಶಿ ಮನೋಹರ ವಿ. ಬೊಂಗಾಳೆ, ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಮಹೇಂದ್ರಕರ್, ಕೋಶಾಧ್ಯಕ್ಷ ಎ. ಪ್ರಭಾಕರ, ನಾಮದೇವ ತರುಣ ಮಂಡಳಿ ಅಧ್ಯಕ್ಷ ಮಣಿಕಂಠ ಆರ್. ಪಿಸೆ, ಸಂತ ಸಕ್ಕೂಬಾಯಿ ಮಹಿಳಾ ಮಂಡಳಿ ಅಧ್ಯಕ್ಷ ಕೌಶಲ್ಯಬಾಯಿ ಖಟಾವ್‌ಕರ್, ವಿಶ್ವ ಕರವೇ ಅಧ್ಯಕ್ಷ ಕೆ.ಜಿ.ಯಲ್ಲಪ್ಪ ಇದ್ದರು.

--