ಹಾರೂಗೇರಿ: ಸಮುದಾಯ ಭವನಗಳು ಕೇವಲ ಸಭೆ-ಸಮಾರಂಭಗಳಿಗೆ ಮೀಸಲಾಗದೆ ಎಸ್ಸಿ ಮಕ್ಕಳು ವಿದ್ಯಾಭ್ಯಾಸ ಮಾಡಲು ಉಪಯೋಗವಾಗಬೇಕು ಎಂದು ಶಾಸಕ ಪಿ.ರಾಜೀವ ಹೇಳಿದರು.
ಪಟ್ಟಣದ ಎಸ್ಸಿ ಜನತಾ ಕಾಲನಿಯಲ್ಲಿ ಕರ್ನಾಟಕ ನೀರಾವರಿ ನಿಗಮದ ಇಲಾಖೆ (ಜೆಎಲ್‌ಬಿಸಿ) ಯೋಜನೆ ಅಡಿ 70 ಲಕ್ಷ ರೂ. ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಹಾಗೂ ಲೋಕೋಪಯೋಗಿ ಇಲಾಖೆಯ ಯೋಜನೆ ಅಡಿ 3 ಕೋಟಿ ರೂ. ಅನುದಾನದಲ್ಲಿ 2.5 ಕಿ.ಮೀ ರಸ್ತೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಇಂದಿನ ಮಕ್ಕಳೇ ದೇಶದ ಆಸ್ತಿಯಾಗಿದ್ದು, ಮಕ್ಕಳನ್ನು ಶಾಲೆ ಬಿಡಿಸದೆ ಉತ್ತಮ ಶಿಕ್ಷಣ ನೀಡಬೇಕು ಎಂದರು.
ಮುಖಂಡ ಶಿವಾನಂದ ದಳವಾಯಿ ಮಾತನಾಡಿ, ಬಡ, ದೀನದಲಿತ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪಿಸುವಲ್ಲಿ ಶಾಸಕ ಪಿ.ರಾಜೀವ ಶ್ರಮಿಸುತ್ತಿದ್ದಾರೆ ಎಂದರು. ಪುರಸಭೆ ಮುಖ್ಯಾಧಿಕಾರಿ ಜಿ.ವಿ.ಹಣ್ಣಿಕೇರಿ, ಬಸನಗೌಡ ಆಸಂಗಿ, ಹನುಮಂತ ಯಲಶೆಟ್ಟಿ, ಬಸವರಾಜ ಖೋತ, ಪರಗೌಡ ಉಮರಾಣಿ, ಕುಮಾರ ಬನಶಂಕರಿ, ಸಂತೋಷ ಶಿಂಗಾಡಿ, ಬಸವರಾಜ ಅರಕೇರಿ, ರಾಮಣ್ಣ ಕುರಿ, ರಾಜು ಅರಳಿಕಟ್ಟಿ, ಮಲ್ಲಪ್ಪ ಐನಾಪುರ, ಜ್ಞಾನೇಶ್ವರ ಧರ್ಮಟ್ಟಿ, ರಾಜು ಅಸ್ಕಿ, ಮಲಕಾರಿ ದಳವಾಯಿ, ಕುಮಾರ ಯಲ್ಲಟ್ಟಿ, ರವಿ ಠಕ್ಕಣ್ಣವರ, ಗುತ್ತಿಗೆದಾರ ಶಶಿಧರ ಶಿಂಗೆ, ಆರ್.ಎಸ್.ಕೋಠಿವಾಲೆ ಇತರರಿದ್ದರು.