ಬಾಗಲಕೋಟೆ : ತಾಲೂಕಿನ ತಿಮ್ಮಾಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ವೈ. ಮೇಟಿ ಚಾಲನೆ ನೀಡಿದರು. 
ಜಿಲ್ಲೆ

ಸಮುದಾಯ ಭವನ-ರಸ್ತೆ ಅಭಿವೃದ್ಧಿಗೆ ಚಾಲನೆ

ಸಂತೋಷ ದೇಶಪಾಂಡೆ

ಬಾಗಲಕೋಟೆ : ನನಗೆ ಜನ್ಮ ನೀಡಿದ ತಿಮ್ಮಾಪುರ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಆಯ್ಕೆ ಮಾಡಲು ಎಲ್ಲ ರೀತಿಯ ಪ್ರಯತ್ನ ನಡೆದಿದೆ. ಸರ್ಕಾರದ ವಿವಿಧ ಯೋಜನೆಗಳ ಅನುದಾನ ಬಳಸಿಕೊಂಡು, ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಬಿಟಿಡಿಎ ಅಧ್ಯಕ್ಷರೂ ಆಗಿರುವ ಶಾಸಕ ಎಚ್.ವೈ. ಮೇಟಿ ಹೇಳಿದರು.

ತಾಲೂಕಿನ ತಿಮ್ಮಾಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಿಮ್ಮಾಪುರ ಗ್ರಾಮವನ್ನು ಗ್ರಾಮ ವಿಕಾಸ ಯೋಜನೆಗೆ ಆಯ್ಕೆ ಮಾಡಲಾಗಿದೆ. ಅಲ್ಲದೇ ಜಿ.ಪಂ, ಸಮಾಜ ಕಲ್ಯಾಣ ಇಲಾಖೆ, 2023-24ನೇ ಸಾಲಿನ ಪ್ರಗತಿ ಕಾಲೋನಿ ಯೋಜನೆಯಡಿ ಒಟ್ಟು 97 ಲಕ್ಷ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ವಿವಿಧ ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರು, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಸರ್ಕಾರದ ಅನುದಾನ, ಗ್ರಾಮೀಣ ಜನರಿಗೆ ಸದ್ಭಳಕೆಯಾಗಬೇಕು. ಕಳಪೆ ಕಾಮಗಾರಿ ಕಂಡು ಬಂದರೆ, ಗುತ್ತಿಗೆದಾರರು ಹಾಗೂ ಸಂಬAಧಿಸಿದ ಇಲಾಖೆಯ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಿಮ್ಮಾಪುರದಲ್ಲಿ ಬಹು ದಿನಗಳ ಬೇಡಿಕೆಯಾಗಿದ್ದ ಬಸವಶ್ರೀ ಸಮುದಾಯ ಭವನ ನಿರ್ಮಾಣಕ್ಕೆ 31 ಲಕ್ಷ, ಕನಶ್ರೀ ಸಮುದಾಯ ಭವನ ನಿರ್ಮಾಣಕ್ಕೆ 16 ಲಕ್ಷ, ಗ್ರಾಮದ ಬಡಿಗೇರ ಅವರ ಮನೆಯಿಂದ ಮುಖ್ಯ ರಸ್ತೆಗೆ ತೆರಳುವ ದಾರಿಯ ಪಕ್ಕದ ಮಲ್ಲಪ್ಪ ಮನ್ನಿಕೇರಿ ನಿವಾಸದಿಂದ ಧರ್ಮೇಶ ತುಂಬರಮಟ್ಟಿ ಅವರ ನಿವಾಸದ ವರೆಗೆ ರಸ್ತೆ ನಿರ್ಮಾಣಕ್ಕೆ 1.50 ಲಕ್ಷ ಬಡಿಗೇರ ಮನೆಯಿಂದ ಮುಖ್ಯ ರಸ್ತೆ ವರೆಗೆ ರಸ್ತೆ ನಿರ್ಮಾಣಕ್ಕೆ 5.50 ಲಕ್ಷ ಡಾ|ಅಂಬೇಡ್ಕರ ಭವನ ನಿರ್ಮಾಣಕ್ಕೆ 24 ಲಕ್ಷ, ಶಿವಪ್ಪ ಮಾದರ ಮನೆಯಿಂದ ಕಾಶಪ್ಪ ಮಂಕಣಿ ಮನೆ ವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ 20 ಲಕ್ಷ ಹೀಗೆ ಒಟ್ಟು 6 ಕಾಮಗಾರಿಗಳಿಗೆ 97 ಲಕ್ಷ ಅನುದಾನ ಒದಿಗಲಾಗಿದೆ ಎಂದು ವಿವರಿಸಿದರು.

ತಿಮ್ಮಾಪುರ, ನನ್ನ ಹುಟ್ಟೂರು. ಇದನ್ನು ಮಾದರಿ ಗ್ರಾಮ ಮಾಡುವ ಆಶಯವಿದೆ. ಇಡೀ ಗ್ರಾಮಸ್ಥರೂ ಸಹಕಾರ ನೀಡಬೇಕು. ಕಳೆದ ಅವಧಿಯಲ್ಲಿ ನಮ್ಮೂರಿಗೆ ಹೊಸ ಗ್ರಾಮ ಪಂಚಾಯತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಲಾಗಿದೆ. ಇದರಿಂದ ಗ್ರಾಮದ ಸಮಸ್ಯೆಗಳಿಗೆ ಸ್ಥಳೀಯ ಆಡಳಿತ ಸ್ಪಂದಿಸಲು ನೆರವಾಗಿದೆ. ಮುಖ್ಯವಾಗಿ ರೈತರು, ಸಾಲ ಸೌಲಭ್ಯ ಪಡೆಯಲು, ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನೆರವಾಗಿದೆ ಎಂದು ತಿಳಿಸಿದರು.

ಗ್ರಾಮದ ಮಹಾದೇವಸ್ವಾಮಿ ಧರ್ಮರ, ಪಾಂಡುಮುತ್ಯಾ ಧರ್ಮರ, ಪ್ರಮುಖರಾದ ಮುತ್ತಪ್ಪ ಹುಗ್ಗಿ, ಉಮೇಶ ಮೇಟಿ ಸೇರಿದಂತೆ ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.