ಜಿಲ್ಲೆ

ಸಮೀಕ್ಷೆಗೆ ಬರುವವರಿಗೆ ನಿಖರ ಮಾಹಿತಿ ನೀಡಿ

ಕೊಳ್ಳೇಗಾಲ: ಪರಿಶಿಷ್ಟ ಜಾತಿಯಲ್ಲಿರುವ ಬಲಗೈ ಸಮುದಾಯ ಜನರು ಜಾತಿ ಗಣತಿ ಕಾಲಂನಲ್ಲಿ ಹೊಲಯ ಎಂದು ಬರೆಸಬೇಕು. ಎಡಗೈ ಸಮುದಾಯ ಜನರು ಮಾದಿಗ ಎಂದು ಬರೆಸಬೇಕು ಎಂದು ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಹೇಳಿದರು.

ಒಳ ಮೀಸಲಾತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇಂದಿನಿಂದಲೇ ಜಾತಿ ಗಣತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದರ ಸದುಪಯೋಗವನ್ನು ಪರಿಶಿಷ್ಟ ಜಾತಿ ಜನರು ಪಡೆದು ಕೊಳ್ಳಬೇಕೆಂದು ನಗರಸಭೆ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಸಮೀಕ್ಷೆ ಮಾಡಲು ಶಿಕ್ಷಕರನ್ನು ಸರ್ಕಾರ ನೇಮಕ ಮಾಡಿದೆ. ಮನೆ ಬಾಗಿಲಿಗೆ ಬರುವ ಅವರಿಗೆ ನಿಖರವಾದ ಮಾಹಿತಿಯನ್ನು ನೀಡಬೇಕು. ಅವರು ಕೇಳಿದ ಪ್ರಶ್ನೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದನೆ ಮಾಡಬೇಕು. ಈ ವೇಳೆ ಮನೆಯ ಮುಖ್ಯಸ್ಥರು ಸ್ಥಳದಲ್ಲಿದ್ದು ಅಗತ್ಯ ಮಾಹಿತಿಯನ್ನು ನೀಡಬೇಕು ಎಂದು ಮನವಿ ಮಾಡಿದರು.

ನಗರಸಭೆ ಸದಸ್ಯ ಶಾಂತರಾಜು, ಪ್ರಕಾಶ್, ಮಂಜುನಾಥ್, ನಗರಸಭೆ ನಾಮ ನಿರ್ದೇಶನ ಸದಸ್ಯ ಸ್ವಾಮಿ ನಂಜಪ್ಪ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರವಿ ಬಸ್ತಿಪುರ, ಮುಖಂಡರಾದ ಸೋಮಣ್ಣ, ಜಗದೀಶ್ ಶಂಕನಪುರ, ಪ್ರಭುಸ್ವಾಮಿ ಇತರರು ಇದ್ದರು.