ತರೀಕೆರೆಯಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಏರ್ಪಡಿಸಿದ್ದ ಸಭೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಎಚ್.ಯು.ಫಾರೂಕ್, ಎನ್.ದಯಾನಂದ್, ಟಿ.ದಾದಾಪೀರ್, ಟಿ.ಎಸ್.ಪ್ರಕಾಶ್ ವರ್ಮ, ಟಿ.ಎಸ್.ಧರ್ಮರಾಜ್ ಇತರರಿದ್ದರು.  
ಜಿಲ್ಲೆ

ಸಮೀಕ್ಷೆಗೆ ಪಟ್ಟಭದ್ರ ಹಿತಾಸಕ್ತಿಗಳಿಂದ ವಿಘ್ನ

ತರೀಕೆರೆ: ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಹಲವು ವರದಿ ಸರ್ಕಾರಕ್ಕೆ ಸಲ್ಲಿಕೆಯಾದರೂ ಜಾರಿಗೆ ಪಟ್ಟಭದ್ರ ಹಿತಾಸಕ್ತಿಗಳಿಂದ ವಿಘ್ನ ಎದುರಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ತರೀಕೆರೆ ಹಾಗೂ ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವಿಭಾಗಗಳಿಂದ ಏರ್ಪಡಿಸಿದ್ದ ವಾಯ್ಸ ಆಫ್ ಒಬಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವರದಿ ಅಂಗೀಕಾರಕ್ಕಾಗಿ ಹಿಂದುಳಿದ ವರ್ಗದವರೆಲ್ಲ ಒಗ್ಗೂಡಿ ಹೋರಾಟ ಮಾಡಬೇಕಲ್ಲದೆ, ನಮ್ಮ ಹಕ್ಕು ಪಡೆದುಕೊಳ್ಳುವತ್ತ ಚಿತ್ತ ಹರಿಸಬೇಕು ಎಂದರು.

ಹೈಕಮಾಂಡ್ ಸೂಚನೆಯನ್ವಯ ರಾಷ್ಟ್ರ ವ್ಯಾಪಿ ಹಿಂದುಳಿದ ವರ್ಗದ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿ ಅವಲೋಕಿಸಿ ಮೇಲೆತ್ತುವ ಕಾರ್ಯ ಸರ್ಕಾರ ಕೈಗೊಳ್ಳುತ್ತಿದೆ. ವಿರೋಧದ ನಡುವೆಯೂ ಸಿಎಂ ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಕೆಲ ಗಣತಿದಾರರು ಬದ್ಧತೆ ಪ್ರದರ್ಶಿಸಿ ಸಮೀಕ್ಷೆ ಚುರುಕುಗೊಳಿಸಿದರೆ, ಇನ್ನೂ ಕೆಲ ಗಣತಿದಾರರು ನಿರ್ಲಕ್ಷೃ ವಹಿಸಿ ಸರ್ವೇ ಮುಂದಗತಿಯಲ್ಲಿ ಸಾಗುವಂತೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಸಾಲು ಸಾಲು ಚುನಾವಣೆ ನಡೆಯಲಿದ್ದು, ಕಾರ್ಯಕರ್ತರು ಸಂಘಟಿತರಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಈ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್, ಅಜ್ಜಂಪುರ ಅಧ್ಯಕ್ಷ ಎನ್.ದಯಾನಂದ್, ಪುರಸಭೆ ಸದಸ್ಯ ಟಿ.ದಾದಾಪೀರ್, ಮಾಜಿ ಅಧ್ಯಕ್ಷ ಟಿ.ಎಸ್.ಧರ್ಮರಾಜ್, ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಒಬಿಸಿ ಘಟಕದ ಅಧ್ಯಕ್ಷ ಟಿ.ಬಿ.ಶ್ರೀನಿವಾಸ್ ಇತರರಿದ್ದರು.