ಜಿಲ್ಲೆ

ಸಮೀಕ್ಷೆಗಳು ದೇಶದ ನೀತಿ ನಿರ್ಧಾರಗಳಲ್ಲಿ ಪ್ರಮುಖ

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶ ಒಂದು ವಿಷಯದ ಮೇಲೆ ತನ್ನ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹಲವು ಕೋನಗಳಿಂದ ಪರಾಮರ್ಶಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಜನರ ಅಭಿಪ್ರಾಯ, ಅಂಕಿ ಸಂಖ್ಯೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆಎಸ್‌ಎಸ್ ಉತ್ಸವ ಭವನದಲ್ಲಿ ನವದೆಹಲಿಯ ಎನ್‌ಸಿಎಇಆರ್, ಜೆಎಸ್‌ಎಸ್ ಜನಸಂಖ್ಯಾ, ಆರ್ಥಿಕ ಸಂಶೋಧನಾ ಕೇಂದ್ರ, ರಾಜ್ಯ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ವತಿಯಿಂದ ಏರ್ಪಡಿಸಿರುವ 3 ವಾರಗಳ ಸಿಬ್ಬಂದಿ ಸಮೀಕ್ಷಾ ತರಬೇತಿ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಮೀಕ್ಷೆಗಳು ನಿಖರವಾಗಿ ವಸ್ತುನಿಷ್ಠವಾಗಿದ್ದಾಗಲೇ ಸರ್ಕಾರದ ನೀತಿ, ನಿಯಮಗಳು ಸರಿಯಾಗಿ ಜಾರಿಯಾಗುತ್ತವೆ. ಅವುಗಳ ಪ್ರಯೋಜನ ಸಮಾಜದ ಕಡೆ ವ್ಯಕ್ತಿಗೂ ತಲುಪುತ್ತವೆ. ಎನ್‌ಸಿಎಇಆರ್ ಅಧಿಕಾರಿಗಳು ವಿಷಯಗಳ ಬಗ್ಗೆ ತರಬೇತಿ ನೀಡಲಿದ್ದು, ವಿಷಯ ಅರ್ಥೈಸಿಕೊಳ್ಳಿ. ನೀವು ತರುವ ಮಾಹಿತಿ ಬಹಳ ಮುಖ್ಯ. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನವನ ಅಭಿವೃದ್ಧಿ ಗುಣಮಟ್ಟ ನಿರ್ಧರಿಸಲು ಉಪಯೋಗಿಸಲ್ಪಡುತ್ತದೆ. ಹೀಗಾಗಿ ನಿಖರ ಮಾಹಿತಿ ತರುವ ಮೂಲಕ ಸಂಸ್ಥೆಗೂ ಒಳ್ಳೆ ಹೆಸರು ತರಲು ಪ್ರಯತ್ನಿಸಬೇಕು ಎಂದರು.
ಓಂ ಪ್ರಕಾಶ ಶರ್ಮಾ ಮಾತನಾಡಿ, ಮೊಟ್ಟ ಮೊದಲ ಬಾರಿಗೆ ಜೆಎಸ್‌ಎಸ್ ಆರ್ಥಿಕ ಸಂಶೋಧನಾ ಕೇಂದ್ರ ಭಾರತದ ಮಾನವ ಅಭಿವೃದ್ಧಿಯ ಮೂರನೇ ಸುತ್ತಿನ ಸಮೀಕ್ಷೆಯನ್ನು ಎನ್‌ಸಿಎಇಆರ್, ಅಮೆರಿಕಾದ ಮೇರಿ ಲ್ಯಾಂಡ್ ವಿವಿ ಹಾಗೂ ನೀತಿ ಆಯೋಗದ ಜತೆಗೆ ಕರ್ನಾಟಕದ 3000 ಕುಟುಂಬಗಳ ಉದ್ಯೋಗ, ಸಾಮಾಜಿಕ, ಆರ್ಥಿಕ, ಆರೋಗ್ಯ, ವಿದ್ಯಾಭ್ಯಾಸದ ಸಮೀಕ್ಷೆ ನಡೆಸಲಿದೆ ಎಂದರು.
ಕೆ.ಎಸ್. ಅರಸ್ ಮಾತನಾಡಿದರು. ಜೆಎಸ್‌ಎಸ್ ಆರ್ಥಿಕ ಸಂಸೋಧನಾ ಕೇಂದ್ರದ ನಿರ್ದೇಶಕಿ ಜ್ಯೋತಿ ಹಳ್ಳದ ಪ್ರಾಸ್ತಾವಿಕಾಗಿ ಮಾತನಾಡಿದರು.
ಜೆಎಸ್‌ಎಸ್ ಐಟಿಐ ಪ್ರಾಚಾರ್ಯ ಮಹಾವೀರ ಉಪಾದ್ಯೆ, ಎನ್‌ಸಿಎಇಆರ್‌ನ ಗುರುಪ್ರೀತಸಿಂಗ್, ಜಿತೇಂದರ್, ರಂಜಿಮಾ ಕೆ.ವಿ, ಇತರರು ಇದ್ದರು. ಚನ್ನು ನೂಲ್ವಿ ನಿರೂಪಿಸಿದರು, ಬಿ.ಐ. ಪುಂಡಪ್ಪನವರ ವಂದಿಸಿದರು.